ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರವಾಗಿದ್ದು, ಬಿಜೆಪಿ ಮುಖಂಡ, ವಕೀಲ ಜಿ. ದೇವರಾಜೇಗೌಡ ಹಾಗೂ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.
ಪೆನ್‌ಡ್ರೈವ್ ಹಂಚಿಕೆ ಸಂಬಂಧ ಏ.23 ರಂದು ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೈಬರ್ ಠಾಣೆಗೆ ದೂರು ನೀಡಿದ್ದರು. ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‌ಗೌಡ ಹಾಗೂ ಚೇತನ್‌ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಂತರ ಆರೋಪಿಗಳು ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಈಗ ಕಾರ್ತಿಕ್ ಮತ್ತು ದೇವರಾಜೇಗೌಡನಿಗೆ ಎಸ್‌ಐಟಿ ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ.
ಎಸ್‌ಐಟಿ ತನಿಖೆ ವೇಳೆ ಜಿ. ದೇವರಾಜೇಗೌಡ ಹಾಗೂ ಕಾರ್ತಿಕ್ ವಿಚಾರಣೆಯ ನಂತರ ಪೆನ್‌ಡ್ರೈವ್ ಹಂಚಿಕೆ ಸಂಬಂಧ ನಿಜ ಮಾಹಿತಿ ಬಹಿರಂಗವಾಗಲಿದೆ.
ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ ಕೆಆರ್ ನಗರದಲ್ಲಿ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಜೊತೆಗೆ ಪ್ರಜ್ವಲ್ ಪ್ರಕರಣಕ್ಕೂ ನಂಟಿದೆ ಎನ್ನಲಾಗಿದೆ.
ಪ್ರಜ್ವಲ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ಸಂತ್ರಸ್ತೆಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನಂತರ ಸ್ಥಳ ಮಹಜರು ಕೂಡ ಮಾಡಲಾಗಿದೆ. ಚನ್ನರಾಯಪಟ್ಟಣದ ಗನ್ನಿಕಡ ತೋಟದ ಮನೆಯಲ್ಲಿ ಸ್ಪಾಟ್ ಮಹಜರ್ ಮಾಡಲಾಗಿದೆ. ಸಂತ್ರಸ್ತೆ ಕೆಲಸ ಮಾಡುವ ಸಂದರ್ಭದಲ್ಲಿ ಪ್ರಜ್ವಲ್, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.