ದಿಂಗಾಲೇಶ್ವರ ಸ್ವಾಮೀಜಿಗೆ ಎಲ್ಲಿಂದಲೋ ಪೇಮೆಂಟ್ ಬಂದಿದೆ. ಹೀಗಾಗಿಯೇ ಅವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿ ವಿರುದ್ಧ ಸ್ಪರ್ಧಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.
ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಮೊದಲು ಶಾಸಕ ವಿನಯ ಕುಲಕರ್ಣಿ ಅವರು ಸ್ವಾಮೀಜಿ ಅವರನ್ನು ಬೇಕಾಬಿಟ್ಟಿ ಬಯ್ಯುತ್ತಿದ್ದರು. ಈಗ ಹೊಗಳುತ್ತಿದ್ದಾರೆ ಎಂದರೆ ಪೇಮೆಂಟ್ ಆಗಿದೆ. ಸ್ವಾಮೀಜಿಗೆ ಯಾರು ಪೇಮೆಂಟ್ ಮಾಡಿದ್ದಾರೆ ಎನ್ನುವುದನ್ನು ಮೇ.7ರ ನಂತರ ಹೇಳುವೆ” ಎಂದರು.
“ದೇಶದ ವಿಚಾರ ಬಂದಾಗ ಲಿಂಗಾಯತರು, ವೀರಶೈವ ಲಿಂಗಾಯತರು ಬಿಜೆಪಿ ಜೊತೆಗೆ ನಿಲ್ಲುತ್ತಾರೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ನಮಗೆ, ನಮ್ಮ ಅಭ್ಯರ್ಥಿಗೆ ಯಾವುದೇ ಸಮಸ್ಯೆಯಿಲ್ಲ. ಹಿಂದೆ ಮಾತೆ ಮಹಾದೇವಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರ ಎಷ್ಟು ಮತಗಳನ್ನು ಗಳಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿಂಗಾಲೇಶ್ವರ ಸ್ವಾಮೀಜಿ ಸುಮಾರು 5000 ಮತಗಳನ್ನು ಪಡೆಯುತ್ತಾರೆ” ಎಂದು ಯತ್ನಾಳ್ ಹೇಳಿದರು.
“ರಾಜ್ಯದಲ್ಲಿ ಹಿಂದೂಗಳಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ ನಿರಂತರವಾಗಿ ಹಲ್ಲೆ, ಕೊಲೆಗಳು ನಡೆದಿವೆ. ಈ ಪರಿಸ್ಥಿತಿ ಬಗ್ಗೆ ರಾಷ್ಟ್ರಪತಿ ಅವರಿಗೆ ವರದಿ ನೀಡಬೇಕು. ಜೊತೆಗೆ ಇಲ್ಲಿನ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು” ಎಂದು ಹೇಳಿದರು.