Homeಕರ್ನಾಟಕಆಸ್ತಿ ತೆರಿಗೆ ಪಾವತಿ | ಜು.31ರವರೆಗೆ ಓಟಿಎಸ್‌ಗೆ ಅವಕಾಶ: ಡಿಸಿಎಂ ಡಿ ಕೆ ಶಿವಕುಮಾರ್

ಆಸ್ತಿ ತೆರಿಗೆ ಪಾವತಿ | ಜು.31ರವರೆಗೆ ಓಟಿಎಸ್‌ಗೆ ಅವಕಾಶ: ಡಿಸಿಎಂ ಡಿ ಕೆ ಶಿವಕುಮಾರ್

ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾಗಿರುವ ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದೆ. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕೊನೆಯ ದಿನಾಂಕದ ಒಳಗಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಚುನಾವಣೆಗಳು ನಡೆಯುತ್ತಿದ್ದ ಕಾರಣ ತೆರಿಗೆ ಪಾವತಿ ವಿಚಾರದಲ್ಲಿ ಪಾಲಿಕೆ ಒತ್ತಡ ಹಾಕಿರಲಿಲ್ಲ. ಆಸ್ತಿ ತೆರಿಗೆ ಕಟ್ಟದವರಿಗೆ ತೆರಿಗೆ ವ್ಯಾಪ್ತಿಯಲ್ಲಿ ಬರಲು ಪಾಲಿಕೆ ವತಿಯಿಂದ ನೀಡಿರುವ ಒನ್ ಟೈಮ್ ಸೆಟ್ಲಮೆಂಟ್ ಅವಕಾಶವನ್ನು ಜುಲೈ 31ಕ್ಕೆ ಅಂತಿಮಗೊಳಿಸಲಾಗುವುದು. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ” ಎಂದರು.

“ಈ ಅವಕಾಶದಲ್ಲಿ ದಂಡದ ಮೇಲೆ ಶೇ.50 ರಷ್ಟು ವಿನಾಯಿತಿ ನೀಡಿದ್ದು, 100%ರಷ್ಟು ಬಡ್ಡಿ ಮನ್ನಾ ಕೂಡ ಮಾಡಲಾಗಿದೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಕಾಯ್ದೆ. ನಮ್ಮ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಿದೆ. ನಾಗರಿಕರು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು” ಎಂದು ವಿನಂತಿಸಿದರು.

“20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ. ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ತೆರಿಗೆ ಪಾವತಿಸಿ 90 ದಿನದೊಳಗೆ ಸೂಕ್ತ ದಾಖಲೆ ಕೊಟ್ಟರೆ ಅವರಿಗೆ ಸೂಕ್ತ ಖಾತೆ ನೀಡಲಾಗುವುದು. ಇನ್ನು 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈಗಾಗಲೇ 50 ಸಾವಿರ ಮಂದಿ ಈ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಆಗಸ್ಟ್ 1ರಿಂದ ತೆರಿಗೆ ಪಾವತಿಸದಿದ್ದರೆ ಡೀಫಾಲ್ಟರ್ ಪಟ್ಟಿಗೆ ಸೇರುತ್ತಾರೆ. ಹೀಗಾಗಿ ಜುಲೈ 31ರ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿ. ಸದ್ಯದ ಲೆಕ್ಕಾಚಾರದ ಪ್ರಕಾರ 5200 ಕೋಟಿಯಷ್ಟು ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ನಮಗೆ 1300 ಕೋಟಿ ಮಾತ್ರ ಸಂಗ್ರಹವಾಗಿದೆ” ಎಂದು ವಿವರಿಸಿದರು.

ಮೂರು ತಿಂಗಳಲ್ಲಿ ಆಸ್ತಿ ದಾಖಲೆ ಡಿಜಿಟಲೀಕರಣ ಪೂರ್ಣ

“20 ಲಕ್ಷ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು. 20 ಲಕ್ಷ ಆಸ್ತಿಗಳ ಪೈಕಿ 8 ಲಕ್ಷ ಆಸ್ತಿಗಳ ದಾಖಲೆಗಳು ಡಿಜಿಟಲೀಕರಣವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.

ಬ್ಲ್ಯೂ ಗ್ರೀನ್ ಊರು ಅಭಿಯಾನ

“ನಮ್ಮ ನಗರವನ್ನು ಹಸಿರಾಗಿಡಲು ಬ್ಲೂ ಗ್ರೀನ್ ಊರು ಎಂಬ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಇದರ ಜತೆಗೆ ಕ್ಲೈಮೆಟ್ ಆಕ್ಷನ್ ಸೆಲ್ ಕೂಡ ರಚಿಸಲಾಗಿದ್ದು, ಇದರಲ್ಲಿ ಬಿಡಬ್ಲ್ಯೂಎಸ್ಎಸ್ ಬಿ, ಬೆಸ್ಕಾಂ, ಬಿಎಂಟಿಸಿ, ಬಿಟಿಪಿ, ಬಿಎಂಆರ್ ಸಿಎಲ್, ಡೆಲ್ಟ್, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕೈಗಾರಿಕೆ, ಗಣಿಗಾರಿಗೆ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಒಳಗೊಳ್ಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಬಿಬಿಎಂಪಿ ಜಾಲತಾಣದಲ್ಲಿ ಲಭ್ಯವಿದೆ” ಎಂದರು.

ಹಸಿರು ರಕ್ಷಕ ಮೂಲಕ 2 ಲಕ್ಷ ಗಿಡ ನೆಡುವ ಗುರಿ

“ಕಳೆದ ವರ್ಷ ಹಸಿರು ರಕ್ಷಕ ಕಾರ್ಯಕ್ರಮ ಅನಾವರಣ ಮಾಡಿದ್ದೆವು. ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಅವುಗಳನ್ನು ಅವರೇ ಬೆಳೆಸುವ ಕಾರ್ಯಕ್ರಮ ಇದಾಗಿತ್ತು. ಈಗಾಗಲೇ 250 ಶಾಲೆಗಳ lಸಹಯೋಗದಲ್ಲಿ 52 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಪೈಕಿ ಶೇ. 80 ರಷ್ಟು ಗಿಡಗಳು ಉಳಿದುಕೊಂಡಿವೆ. 20 % ಗೆ ಬದಲಿ ಗಿಡ ನೆಡಲಾಗುವುದು” ಎಂದು ಹೇಳಿದರು.

ಬೆಳಿಗ್ಗೆ 5 ರಿಂದ ರಾ.10 ರವರೆಗೆ ಪಾರ್ಕ್ ಓಪನ್

“ನಗರದಲ್ಲಿನ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆಯಲಾಗುತ್ತಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆಯೂ ಉದ್ಯಾನಗಳನ್ನು ತೆರೆಯ ಬೇಕು ಎಂದು ಮನವಿ ನೀಡಿದ್ದು, ಹೀಗಾಗಿ ನಗರದ ಎಲ್ಲಾ ಉದ್ಯಾನಗಳನ್ನು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ತೆರೆಯಲು ನಿರ್ಧರಿಸಲಾಗಿದೆ. ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದ್ದು ಈ ಸಮಯ ಇಲ್ಲಿಗೆ ಅನ್ವಯವಾಗುವುದಿಲ್ಲ. ಉದ್ಯಾನವನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು. ಇದರ ಜತೆಗೆ 22660000, 22221188 ಪಾಲಿಕೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. 9480685700 ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು” ಎಂದು ವಿವರಿಸಿದರು.

ಅನಧಿಕೃತ ಫ್ಲೆಕ್ಸ್; ಎಆರ್ ಓ ವಿರುದ್ಧವೂ ಪ್ರಕರಣ

“ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್ ನಿಷೇಧ ಮಾಡಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸುವುದು ಆಯಾ ಪ್ರದೇಶದ ಸಹಾಯಕ ಕಂದಾಯ ಅಧಿಕಾರಿಯ (ARO) ಜವಾಬ್ದಾರಿಯಾಗಿದ್ದು, ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಇದ್ದರೆ, ಅನಧಿಕೃತ ಫ್ಲೆಕ್ಸ್ ಹಾಕಿದವರ ಜತೆಗೆ ಈ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಲು 1533 ಸಹಾಯವಾಣಿಯನ್ನು ಸಂಪರ್ಕಿಸಬಹುದು. 9480683939 ವಾಟ್ಸಪ್ ಮೂಲಕ ಸಾರ್ವಜನಿಕರು ಅನಧಿಕೃತ ಫ್ಲೆಕ್ಸ್ ಹಾಕಿರುವ ಫೋಟೋ ಹಾಗೂ ವಿಳಾಸ ಕಳುಹಿಸಬಹುದು. ಆಗ ಪಾಲಿಕೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು” ಎಂದರು.

ಬಿಬಿಎಂಪಿ ಚುನಾವಣೆ ಬಗ್ಗೆ ಕೇಳಿದಾಗ, “ಬಿಬಿಎಂಪಿ ಚುನಾವಣೆ ಮಾಡಲು ಮೀಸಲಾತಿ ಸೇರಿದಂತೆ ಇತರೆ ಪ್ರಕ್ರಿಯೆ ಪೂರ್ಣಗೊಳಿಸಲು ತಯಾರು ಮಾಡಿದ್ದೇವೆ. ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments