ಗೌತಮ್ ಅದಾನಿ ವಿರುದ್ಧ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಉದ್ಯಮಿಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡುವಂತೆ ಸಂಸತ್‌ನ ನೈತಿಕ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗುತ್ತಿದೆ.
ಮಹುವಾ ಮೊಯಿತ್ರಾ ಪ್ರಶ್ನೆ ಕೇಳಲು ಹಣ ಪಡೆದ ಆರೋಪಗಳನ್ನು ಪರಿಶೀಲಿಸುತ್ತಿರುವ ಲೋಕಸಭೆಯ ನೀತಿ ನಿಯಮ ಸಮಿತಿಯು ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ‘ಅಸಂಬದ್ಧ ನಡವಳಿಕೆ’ಯ ಆಧಾರದ ಮೇಲೆ ಸಂಸತ್ತಿನ ಕೆಳಮನೆಯಿಂದ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಲು ನಿರ್ಧರಿಸಿದೆ.
”ಮಹುವಾ ಮೊಯಿತ್ರಾ ವಿರುದ್ಧದ ತನಿಖೆಯನ್ನು ಲೋಕಪಾಲ ಸಂಸ್ಥೆಯು ಸಿಬಿಐಗೆ ಶಿಫಾರಸು ಮಾಡಿದೆ” ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ, ಈ ವಿಚಾರದಲ್ಲಿ ಲೋಕಪಾಲ ಸಂಸ್ಥೆಯಾಗಲೀ, ಸಿಬಿಐನಿಂದಾಗಲೀ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
ಈ ವರದಿಯನ್ನು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಲೋಕಸಭ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುತ್ತದೆ. ಚರ್ಚೆಯ ಬಳಿಕ ಪೂರಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊಯಿತ್ರಾ ಅವರು ಗುರುವಾರ ಸಮಿತಿ ಮುಂದೆ ಹಾಜರಾಗುವ ನಿರೀಕ್ಷೆ ಇದೆ.
ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕ ನೇತೃತ್ವದ ಸಮಿತಿಯು ತನ್ನ ಕರಡು ವರದಿಯನ್ನು ಅಂಗೀಕರಿಸಲು ಗುರುವಾರ ಸಭೆ ನಡೆಸುತ್ತಿದ್ದು, ಸಮಿತಿಯ ವಿರೋಧ ಪಕ್ಷದ ಸದಸ್ಯರು ತೀವ್ರ ವಾಗ್ವಾದಕ್ಕಿಳಿಯುವ ಸಾಧ್ಯತೆ ಇದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ತಮ್ಮ ವಿರುದ್ಧದ ಮಾಹಿತಿಯನ್ನು ಪ್ರಶ್ನಿಸಿರುವ ಸಂಸದೆ ಮಹುವಾ ಮೊಯಿತ್ರಾ ಅವರು, ”ಈ ಕೇಂದ್ರ ಸರಕಾರದಲ್ಲಿ ಲೋಕಪಾಲ ಸಂಸ್ಥೆ ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂಬುದನ್ನು ತಿಳಿದು ಸಂತೋಷವಾಗಿದೆ” ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೇ ”ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಲಿದೆ ಎಂಬ ವಿಚಾರದಲ್ಲಿ ಲೋಕಪಾಲ ಸಂಸ್ಥೆಯು ಅಧಿಕೃತ ಮಾಹಿತಿ ನೀಡಿಲ್ಲವೇಕೆ” ಎಂದು ಪ್ರಶ್ನಿಸಿದ್ದಾರೆ.