ದೇಶದ ಪ್ರಸಿದ್ಧ ಜಾನಪದ ಗಾಯಕಿ, ‘ಬಿಹಾರದ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾದ ಶಾರದಾ ಸಿನ್ಹಾ (72) ಮಂಗಳವಾರ ರಾತ್ರಿ ಕೊನೆಯುಸಿರೆಳೆದರು.
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ದೆಹಲಿಯ ‘ಏಮ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲಕಾಲ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾರದಾ ಸಿನ್ಹಾ 1970ರಿಂದಲೂ ಸಂಗೀತ ಕ್ಷೇತ್ರದಲ್ಲಿ ಹೆಸರಾದ ಚೇತನ. ಭೋಜ್‌ಪುರಿ, ಮೈಥಿಲಿ ಮತ್ತು ಹಿಂದಿ ಜಾನಪದ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
“ಕಾರ್ತಿಕ್ ಮಾಸ್ ಇಜೋ ರಿಯಾ’, ‘ಕೋಯಲ್ ಬಿನ್’ ತರಹದ ಜನಪದ ಗೀತೆಗಳು, ‘ಗ್ಯಾಂಗ್ಸ್ ಆಫ್ ವಸೇಪುರ್’ ಹಿಂದಿ ಸಿನಿಮಾದ ‘ತಾರ್ ಬಿಜಿಲಿ’, ‘ಹಮ್ ಆಪೈ ಹೈ ಕೌನ್’ ಚಿತ್ರದ ‘ಬಾಬುಲ್’ ಹಾಡುಗಳ ಗಾಯನದಿಂದ ಶಾರದಾ ಅವರು ಛಾಪು ಮೂಡಿಸಿದ್ದರು. ಶಾರದಾ ಅವರನ್ನು ಅಭಿಮಾನಿಗಳು ‘ಬಿಹಾರಿ ಕೋಕಿಲಾ’ ಎಂದು ಕರೆಯುತ್ತಿದ್ದರು.
ಬಿಹಾರದ ಜಾನಪದ ಲೋಕಕ್ಕೆ ಸಿನ್ಹಾ ಸಾಂಸ್ಕೃತಿಕ ರಾಯಭಾರಿಯಂತಿದ್ದರು. ಅದರಲ್ಲೂ ವಿಶೇಷವಾಗಿ ಚತ್ ಗೀತೆ ಎಂದರೆ ತಕ್ಷಣ ಇವರ ಹೆಸರೇ ಜನಜನಿತ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾರದಾ ಸಿನ್ಹಾರ ಹೆಸರು ಚತ್ ಉತ್ಸವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಬಿಹಾರ ಹಾಗೂ ಉತ್ತರ ಭಾರತದ ವಿವಿಧೆಡೆ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಮೋದಿ ಸಂತಾಪ
“ಪ್ರಸಿದ್ಧ ಜಾನಪದ ಗಾಯಕಿ ಶಾರದಾ ಸಿನ್ಹಾಜೀ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಹಾಡುಗಳು ಹಲವು ದಶಕಗಳಿಂದ ಜನಪ್ರಿಯವಾಗಿವೆ. ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂತಾಪಗಳು” ಎಂದು ಪ್ರಧಾನಿ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.