Homeಕರ್ನಾಟಕಸಂಪುಟ ಸಭೆ | ಮೈಕ್ರೋ ಫೈನಾನ್ಸ್ ಹಾವಳಿಗೆ ಸುಗ್ರೀವಾಜ್ಞೆ, ಕ್ರೀಡಾಪಟುಗಳ ಮೀಸಲಾತಿ ಪ್ರಮಾಣ ಏರಿಕೆ

ಸಂಪುಟ ಸಭೆ | ಮೈಕ್ರೋ ಫೈನಾನ್ಸ್ ಹಾವಳಿಗೆ ಸುಗ್ರೀವಾಜ್ಞೆ, ಕ್ರೀಡಾಪಟುಗಳ ಮೀಸಲಾತಿ ಪ್ರಮಾಣ ಏರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ತಡೆಗೆ ಹೊಸದಾದ ಮಸೂದೆ ತರಲು ಒಪ್ಪಿಗೆ ಪಡೆಯಲಾಗಿದ್ದು, ಅದನ್ನು ಸುಗ್ರೀವಾಜ್ಞೆಯಾಗಿ ಜಾರಿಗೊಳಿಸಲು ರಾಜ್ಯಪಾಲರ ಬಳಿ ಅಂಕಿತ ಪಡೆಯಲು ಸಂಪುಟ ಸಭೆ ನಿರ್ಧರಿಸಿದೆ.

ಕಾನೂನು ಮತ್ತು ಸಂಸದೀಯ ಸಚಿವ ಎಚ್​ಕೆ ಪಾಟೀಲ್ ಅವರು ಸಚಿವ ಸಂಪುಟ ನಿರ್ಧಾಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿ, “ಫೈನಾನ್ಸ್​​​ಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಅಮಾನವೀಯವಾಗಿ ಮೈಕ್ರೋ ಪೈನಾನ್ಸ್​ನಿಂದ ಸಾಲ ವಸೂಲಿ ಆಗುತ್ತಿದೆ. ಇಂದು ಕೂಡ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶ ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಕೆಲವು ಮಹತ್ವದ ವಿಚಾರ ಇರುವುದರಿಂದ ಸಭೆ ಮಾಡುತ್ತಿದ್ದೇವೆ. ನಂತರ ಮಸೂದೆಗೆ ಸ್ಪಷ್ಟ ಚಿತ್ರಣ ನೀಡುತ್ತೇವೆ” ಎಂದರು.

ಕ್ರೀಡಾಪಟುಗಳ ಮೀಸಲಾತಿ ಪ್ರಮಾಣ ಏರಿಕೆ

“ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸಟೇಬಲ್‌ನಿಂದ ಡಿವೈಎಸ್‌ಪಿವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2 ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ” ಎಂದು ಹೇಳಿದರು.

“ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು 2025ರ ಕರಡನ್ನು ಭಾರತ ಸಂವಿಧಾನದ ಅನುಚ್ಛೇದ 318 ರನ್ವಯ ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು; ಹಾಗೂ ಸದರಿ ಕರಡು ವಿನಿಮಯಗಳಿಗೆ ಯಾವುದೇ ಆಕ್ಷೇಪಣೆ/ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಕರಡು ವಿನಿಯಮಗಳಲ್ಲಿ ಯಾವುದೇ ಪ್ರಮುಖ ತಿದ್ದುಪಡಿಗಳನ್ನು ಮಾಡುವ ಅವಶ್ಯಕತೆ ಇಲ್ಲದಿದ್ದಲ್ಲಿ ಸದರಿ ವಿನಿಯಮಗಳನ್ನು ಪುನH ಸಚಿವ ಸಂಪುಟ ಮುಂದೆ ಮಂಡಿಸದೆ ಅಂತಿಮಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ” ಎಂದು ಹೇಳಿದರು.

ಕಿರು ಬಂದರುಗಳಲ್ಲಿ ಶುಲ್ಕ ಪರಿಷ್ಕರಣೆ

ಲೋಕೋಪಯೋಗಿ ಮತ್ತು ಬಂದರು ಮತ್ತು ಒಳನಾಡು ಜಲಸಾರಿಗೆ ಅಧಿಸೂಚನೆಯಂತೆ ರಾಜ್ಯದ ಕಿರು ಬಂದರುಗಳಲ್ಲಿ ಸಂಗ್ರಹಿಸುತ್ತಿರುವ ಬಂದರು ಶುಲ್ಕ ಪರಿಷ್ಕರಿಸಲಾಗಿತ್ತು. ರಾಜ್ಯದ ಕಿರು ಬಂದರುಗಳಲ್ಲಿ ಸಂಗ್ರಹಿಸುತ್ತಿರುವ ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸಲಾಗಿತ್ತು. ರಾಜ್ಯದ ಚಿಕ್ಕ ಬಂದರುಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳ ಪರಿಷ್ಕರಣೆ ಹಾಗೂ ಹಾರ್ಬರ್ ಕ್ರಾಫ್ಟ್ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್‌ಲ್ಯಾಂಡ್ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳ ಪರಿಷ್ಕರಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಪಿಪಿಪಿ ಕಾರ್ಯನೀತಿಗೆ ಅನುಮೋದನೆ

ಕರ್ನಾಟಕ ಸರ್ಕಾರದ (ವ್ಯವಹಾರದ ವಹಿವಾಟು) ನಿಯಮಗಳು-1977ರ ಮೊದಲ ಶೆಡ್ಯೂಲ್‌ನ ಐಟಂ ಸಂಖ್ಯೆ: 28ರ ಪ್ರಕಾರ, ಅನುಬಂಧ-1 ರಲ್ಲಿ ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕಾರ್ಯನೀತಿ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ರೈಲ್ವೆ ಕ್ರಾಸಿಂಗ ಬದಲು ಮೇಲ್ಲೇತುವೆ

ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ 1/600/700 ರಲ್ಲಿ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ಸಂಖ್ಯೆ 3ರ ಬದಲಿಗೆ ರಸ್ತೆ ಮೇಲ್ಲೇತುವೆ ಮತ್ತು ಕೂಡುರಸ್ತೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತವನ್ನು ರೂ.45.99 ಕೋಟಿಗಳಿಂದ 83.72 ಕೋಟಿ ರೂ.ಗಳಿಗೆ ಹೆಚ್ಚುವರಿಯಾಗಿ ಪರಿಷ್ಕರಣೆ ಮಾಡಲು ತಾಂತ್ರಿಕ ಸಮಿತಿಯ ಒಪ್ಪಿಗೆಯನ್ನು ಸಚಿವ ಸಂಪುಟ ಅನುಮೋದಿಸಿದೆ.

ಕಡಣಿ ಸೇತುವೆ ನಿರ್ಮಾಣ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 44.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಅಕ್ಷಯ ಫುಡ್ ಪಾರ್ಕ್‌ಗೆ 4 ಪಥ ರಸ್ತೆ

ಚಿತ್ರದುರ್ಗ ಜಿಲ್ಲೆಯಲ್ಲಿ ತರಕಾರಿ, ಹಣ್ಣು-ಹಂಪಲು ಹಾಗೂ ಇತರೆ ದವಸ ಧಾನ್ಯಗಳನ್ನು ಶೇಖರಿಸಲು ಹಿರಿಯೂರು ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿ ದಾಸ್ತಾನು ಮಾಡಲು 107 ಎಕರೆ ವಿಸ್ತೀರ್ಣದಲ್ಲಿ ಅಕ್ಷಯ ಫುಡ್ ಪಾರ್ಕ್ ಕಂಪನಿಯವರು ಒಂದು ಘಟಕವನ್ನು ಮೂಲಭೂತ ಸೌಕರ್ಯಗಳೊಂದಿಗೆ ಸ್ಥಾಪಿಸಿದ್ದಾರೆ. ಅಕ್ಷಯ ಫುಡ್ ಪಾರ್ಕ್‌ನ್ನು ಸಂಪರ್ಕಿಸಲು 4 ಪಥಗಳ ರಸ್ತೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ರಾಜ್ಯ ಹೆದ್ದಾರಿ-24 ರಿಂದ ಅಕ್ಷಯ ಫುಡ್ ಪಾರ್ಕ್ ಸಂಪರ್ಕಿಸಲು 4 ಪಥಗಳ ರಸ್ತೆ ನಿರ್ಮಾಣ ಕಾಮಗಾರಿಯನ್ನು 20 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಗೆ ಗುತ್ತಿಗೆ ಆಹ್ವಾನಿಸಲು; ಸಚಿವ ಸಂಪುಟ ನಿರ್ಣಯಿಸಿದೆ.

50 ಗ್ರಾಮ ಪಂಚಾಯತಿಗಳಲ್ಲಿ ಹೊಂಬೆಳಕು

‘ಹೊಂಬೆಳಕು’ ಯೋಜನೆಯಡಿ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ರೂ.25.00 ಕೋಟಿಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಉಪನಗರ ಯೋಜನೆಗೆ ಅನುಮೋದನೆ

ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್ ಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು. ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶ: ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.

ಎಂ.ಬಿ ಭಜಂತ್ರಿ ಸೇವೆಗೆ ಮರುಸ್ಥಾಪನೆ

ಎಂ.ಬಿ ಭಜಂತ್ರಿ ಸೇವೆಯಿಂದ ವಜಾಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ, ಅಥಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿರುವ ಸರ್ಕಾರದ ಆದೇಶ ದಂಡನಾದೇಶವನ್ನು ಹಿಂಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಆರೋಗ್ಯ ಸಿಬ್ಬಂದಿಗೂ ಎಸ್.ಟಿ.ಎಫ್ ಮಾದರಿಯಲ್ಲಿ ನಿವೇಶನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ / ಸಿಬ್ಬಂದಿಗಳು ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನೀಡಲಾದ ಸೌಲಭ್ಯಗಳನ್ನು ತಮಗೂ ನೀಡಬೇಕೆಂದು ಕೋರಿರುತ್ತಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲಭ್ಯವಿರುವ ಹಂಚ್ಯಾ-ಸಾತಗಳ್ಳಿ ‘ಎ’ ವಲಯದಲ್ಲಿ ನಿವೇಶನ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ. ಮೂರು ಜನರಿಗೆ ತಲಾ ಒಂದು ನಿಗದಿಪಡಿಸಲಾಗಿದೆ. ನಿವೇಶನವನ್ನು 2,100 ರೂ.ಗೆ ಚ.ಮೀ ದರ ನಿಗದಿಪಡಿಸಲಾಗಿದೆ.

ಮಸೂದೆ ಹಿಂದಕ್ಕೆ

ಪ್ರೀಮಿಯಂ ಎಫ್.ಎ.ಆರ್ ಕುರಿತು “ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024” ಕ್ಕೆ ತರಲಾಗಿದ್ದ ವಿಧೇಯಕವನ್ನು ಹಿಂಪಡೆಯಲು ಸಚಿವ ಸಂಪುಟ ಅನುಮೋದಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments