ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿ ಹುದ್ದೆಗಳನ್ನು ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಆಶಾಕಿರಣ ಹೊಸ ವಿಧಾನದ ಅಡಿಯಲ್ಲಿ, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಾಶ್ವತ ಆಧಾರದ ಮೇಲೆ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಗೆ ನೇತ್ರಾಧಿಕಾರಿಗಳ ಕೊರೆಯಿದ್ದು, ಇದನ್ನು ಸರಿದೂಗಿಸಲು ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿ ಹುದ್ದೆಗಳನ್ನು ಇಲ್ಲದಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ – 40 ಹುದ್ದೆ, ಹೊಸದಾಗಿ ಸೃಜಿಸಿರುವ ಸಮುದಾಯ ಆರೋಗ್ಯ ಕೇಂದ್ರಗಳಿಗೆ 43 ಹುದ್ದೆ, ನೇತ್ರಾಧಿಕಾರಿಗಳ ಹುದ್ದೆಗಳು ಇಲ್ಲದ ತಾಲ್ಲೂಕು ಆಸ್ಪತ್ರೆಗಳಿಗೆ – 34 ಹುದ್ದೆಗಳು, ವರ್ಷಕ್ಕೆ 200 ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತಾಲ್ಲೂಕು ಆಸ್ಪತ್ರೆಗಳಿಗೆ -30 ಹುದ್ದೆ,, ಜಿಲ್ಲಾ ಆಸ್ಪತ್ರೆ ರಾಮನಗರಕ್ಕೆ – 2 ಹುದ್ದೆ,ಹಾಗೂ ಜಿಲ್ಲಾ ಆಸ್ಪತ್ರೆ ಬಳ್ಳಾರಿ ಇಲ್ಲಿಗೆ – 1 ಹುದ್ದೆಯನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ.
ಹೀಗೆ ಸ್ಥಳಾಂತರಗೊಳ್ಳುವ ಸದರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇತ್ರಾಧಿಕಾರಿಗಳನ್ನು ಸ್ಥಳಾಂತರಿಸಿದ ಆಶಾಕಿರಣದ ದೃಷ್ಟಿಕೇಂದ್ರಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು, 2025 ರ ನಿಯಮ 15(1)(c) ರಂತೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಸೂಚಿಸಿದೆ.


