ಅಚ್ಚರಿಯ ಹಾಗೂ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರನ್ನು ತಮ್ಮ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಳೆದ 2022ರ ಅಕ್ಟೋಬರ್‌ನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರರು-5, ಎಐಎಂಐಎಂ-2 ಹಾಗೂ ಜೆಡಿಎಸ್ 1 ಸ್ಥಾನವನ್ನು ಪಡೆದಿತ್ತು.
ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಮೇಯರ್, ಉಪಮೇಯರ್ ಮೀಸಲಾತಿ ಸಂಬಂಧ ಕೋರ್ಟ್ ನಲ್ಲೂ ವ್ಯಾಜ್ಯ ಉಂಟಾಗಿ ಕೊನೆಗೆ 14 ತಿಂಗಳ ನಂತರ ಅಣದರೆ, 2024ರ ಜನವರಿ 9ರಂದು ಮೇಯರ್, ಉಪ ಮೇಯರ್ ಚುನಾವಣೆ ನಡೆದಿತ್ತು.
ಈ ನಡುವೆ, ಪ್ರಕಾಶ ಮಿರ್ಜಿ, ಮೈನುದ್ದೀನ್ ಬೀಳಗಿ ಎಂಬುವರು ಹೈಕೋರ್ಟಿಗೆ ರಿಟ್ ಸಲ್ಲಿಸಿ, ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಪಾಲಿಕೆ ಸದಸ್ಯರು ತಮ್ಮ ಸದಸ್ಯತ್ವ ಅವಧಿ ಆರಂಭವಾದ ಒಂದು ತಿಂಗಳಲ್ಲಿ ತಮ್ಮ ಹಾಗೂ ಕುಟುಂಬದ ಆಸ್ತಿ ಘೋಷಣೆ ಮಾಡಬೇಕು. ಆದರೆ ಇಲ್ಲಿಯವರೆಗೆ ಯಾರೂ ಕೂಡ ಆಸ್ತಿ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದ್ದರು.
ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರೂ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಸದಸ್ಯತ್ವ ನಿಷ್ಕ್ರಿಯಗೊಂಡಿದೆ ಎಂದು ಆದೇಶಿಸಬೇಕು. ಇನ್ನು ಮುಂದೆ ಪಾಲಿಕೆಯ ಯಾವುದೇ ಕಾರ್ಯ ಮತ್ತು ವ್ಯವಹಾರದಲ್ಲಿ ಭಾಗವಹಿಸಬಾರದು ಎಂದು ಮಧ್ಯಂತರ ಆದೇಶ ನೀಡುವಂತೆ ಕೋರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ಜನವರಿ 23ರಂದು ಆದೇಶ ನೀಡಿ, ಎಲ್ಲ ಸದಸ್ಯರ ಆಸ್ತಿ ವಿವರ ಪಡೆಯುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶ ನೀಡಿತ್ತು. ತಪ್ಪಿದಲ್ಲಿ ಪೌರಾಡಳಿತ ನಿರ್ದೇಶಕರಿಗೆ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ, ಪಾಲಿಕೆ ಆಯುಕ್ತರು ಎಲ್ಲಾ ಸದಸ್ಯರಿಗೂ ಆಸ್ತಿ ವಿವರ ನೀಡುವಂತೆ ಸೂಚಿಸಿದ್ದರು. ಆದರೆ ಈ ಪತ್ರಕ್ಕೆ ಯಾರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಯಾವುದೇ ಸದಸ್ಯರು ಕಲಂ 19 (1) ಅನ್ವಯ ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಘೋಷಣಾ ಪತ್ರ ಸಲ್ಲಿಸಿಲ್ಲ. ಆದ್ದರಿಂದ 19 (1) ನೇ ಉಪ ಪ್ರಕರಣದಲ್ಲಿ ಯಾವುದೇ ಸದಸ್ಯರು ತಪ್ಪಿದಲ್ಲಿ ಅಂತಹ ಸದಸ್ಯರ ಸದಸ್ಯತ್ವ ನಿಂತು ಹೋಗತಕ್ಕದ್ದು ಎಂಬ ನಿಯಮವಿರುತ್ತದೆ ಎಂಬುವುದಾಗಿ ಉಲ್ಲೇಖಿಸಿ ಮುಂದಿನ ಕ್ರಮಕ್ಕೆ ಪಾಲಿಕೆ ಆಯುಕ್ತರು ವಿನಂತಿಸಿದ್ದರು.
ಅಲ್ಲದೆ ಹೈಕೋರ್ಟಿಗೂ ಕೂಡ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದರು. ಇದನ್ನು ಗಮನಿಸಿದ ಹೈಕೋರ್ಟ್ ನಿಯಮ ಅನುಸಾರ ಆಸ್ತಿ ವಿವರ ಸಲ್ಲಿಸಲು ಸದಸ್ಯರು ವಿಫಲವಾಗಿದ್ದಾರೆ ಈ ಹಿನ್ನೆಲೆಯಲ್ಲಿ ಅವರನ್ನು ಸದಸ್ಯತ್ವದಿಂದ ಹಣಹ ಗೊಳಿಸಬೇಕು ಎಂದು ವಿಭಾಗಿಯ ಆಯುಕ್ತರಿಗೆ ಆದೇಶ ನೀಡಿತ್ತು.
ಅದರಂತೆ ಇದೀಗ, ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಮಹಾನಗರ ಪಾಲಿಕೆಯ ಎಲ್ಲಾ 35 ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.