Homeಕರ್ನಾಟಕಎಂಎಂ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಭಿಪ್ರಾಯ ಸಂಗ್ರಹ: ಈಶ್ವರ ಖಂಡ್ರೆ

ಎಂಎಂ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಭಿಪ್ರಾಯ ಸಂಗ್ರಹ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದ್ದು, ಈ ಕಾನನ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ಪರಿಪಾಲಕರು ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಂ.ಎಂ.ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಲು ಕ್ರಮ ವಹಿಸುವಂತೆ ಹಾಗೂ ಎಲ್ಲ ಬಾಧ್ಯಸ್ಥರ ಸಭೆ ಕರೆದು ಚರ್ಚಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ರಾಜ್ಯದಲ್ಲಿ ವನ್ಯಜೀವಿಗಳ ಅಸಹಜ ಸಾವನ್ನು ನಿಯಂತ್ರಿಸಲು ಮತ್ತು ವನ್ಯಮೃಗಗಳ ದಾಳಿಯಿಂದ ಅಮೂಲ್ಯ ಜೀವಹಾನಿ ಆಗುವುದನ್ನು ತಡೆಯಲು ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ, ಆಯಾ ವಲಯದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ನಿರ್ದೇಶನ ನೀಡಿದರು.

ಕೇಂದ್ರೀಕೃತ ಕಮಾಂಡ್ ಸೆಂಟರ್

ರಾಜ್ಯದಲ್ಲಿ ಸುಮಾರು 40 ಸಾವಿರ ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದ್ದು, ಇದನ್ನು ಭೌತಿಕವಾಗಿ ಕಾವಲು ಕಾಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ವನ್ಯಜೀವಿಗಳ ಕಳ್ಳಬೇಟೆ ಮತ್ತು ಅರಣ್ಯ ಒತ್ತುವರಿ, ಮರಗಳ ಅಕ್ರಮ ಕಡಿತಲೆ ಆಗದಂತೆ ನಿಗ್ರಹಿಸಲು ಕೃತಕ ಬುದ್ಧಿಮತ್ತೆ, ಡ್ರೋನ್ ಕ್ಯಾಮರಾ, ಕಾಡಿನಂಚಿನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಆ ಎಲ್ಲ ಕ್ಯಾಮರಾಗಳ ದೃಶ್ಯಗಳ ಆಧಾರದಲ್ಲಿ ವನ್ಯಮೃಗ ಮತ್ತು ಕಳ್ಳಬೇಟೆಗಾರರ ಚಲನವಲನದ ಬಗ್ಗೆ ನಿಗಾ ಇಡಲು ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ಮಾಡಿ, ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲು ಮತ್ತು ತತ್ ಕ್ಷಣ ಅಗತ್ಯವಿರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಕೂಡಲೇ ನೇಮಕಾತಿ ಮಾಡಿಕೊಳ್ಳಲು ಮತ್ತು ವನ, ವನ್ಯಜೀವಿ ಸಂರಕ್ಷಣೆಗೆ ಅಗತ್ಯವಾದ ವಾಹನ, ಉಪಕರಣಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ ನೀಡಿದರು.

ಸೌಹಾರ್ದ ಸಂಬಂಧ

ಕಾಡಿನಂಚಿನ ಗ್ರಾಮಗಳ ಜನರೊಂದಿಗೆ ಅರಣ್ಯಾಧಿಕಾರಿಗಳು ಸೌಹಾರ್ದಯುತ ಸಂಬಂಧ ಹೊಂದಬೇಕು. ಜನರಿಗೆ ಅರಣ್ಯ ಮತ್ತು ವನ್ಯಜೀವಿಗಳ ಮಹತ್ವ ತಿಳಿಸಿಕೊಡಬೇಕು. ಕಾಡಿನಂಚಿನ ಜನರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು, ಕೌಶಲ್ಯ ತರಬೇತಿ ಕೊಡಿಸಬೇಕು. ಆಗ ಅರಣ್ಯ ಮತ್ತು ವನ್ಯಜೀವಿ ರಕ್ಷಣೆಗೆ ಜನರೇ ಮುಂದಾಗುತ್ತಾರೆ. ಈ ರೀತಿಯ ವಾತಾವರಣ ಸೃಷ್ಟಿಸಲು ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments