Homeಕರ್ನಾಟಕಅಪರೂಪದ ಕಾಯಿಲೆಗಳಿಂದ ಬಳಲುವವರೇ ಹಣದ ಚಿಂತೆ ಬಿಡಿ: ಡಿ.ಕೆ. ಶಿವಕುಮಾರ್‌

ಅಪರೂಪದ ಕಾಯಿಲೆಗಳಿಂದ ಬಳಲುವವರೇ ಹಣದ ಚಿಂತೆ ಬಿಡಿ: ಡಿ.ಕೆ. ಶಿವಕುಮಾರ್‌

  • ಕರ್ನಾಟಕದಿಂದ ಪ್ರತಿವರ್ಷ 13,940 ವೈದ್ಯರು ಹೊರಬರುತ್ತಿದ್ದಾರೆ

ಹಿಮೋಫಿಲಿಯಾ ಹಾಗೂ ಇತರೇ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಧೈರ್ಯ ತುಂಬಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕುಸುಮ ಸಂಜೀವಿನಿ’ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

“ಒಬ್ಬ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ ಐದು ಲಕ್ಷ ಖರ್ಚಾಗಲಿದೆ. ಹಿಮೋಫಿಲಿಯಾದಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು, ಅವರ ಬದುಕಿಗೆ ಶಕ್ತಿ ತುಂಬಬೇಕು ಎಂದು ನಮ್ಮ ಸರ್ಕಾರ ಹೊರಟಿದೆ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ” ಎಂದರು.

“ಈ ರೋಗ ಬಂದ ತಕ್ಷಣ ಭವಿಷ್ಯವೇ ಇಲ್ಲ ಎಂದು ಭರವಸೆ ಕಳೆದುಕೊಳ್ಳಬಾರದು. ಮಕ್ಕಳು, ತಂದೆತಾಯಂದಿರ ಜೊತೆ ನಾವಿದ್ದೇವೆ. ಇಷ್ಟೊಂದು ಹಣ ಹೊಂದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಆದ ಕಾರಣ ನಾವು ನಿಮ್ಮಜೊತೆಯಾಗಿದ್ದೇವೆ. ಯಾವುದೇ ರೋಗ ಆಗಿರಬಹುದು ಬಯಸಿ ಬರುವಂತಹದ್ದಲ್ಲ. ಮುಗ್ದ ಮಕ್ಕಳು ಇದರಿಂದ ಬಳಲುತ್ತಿದ್ದಾರೆ. ಪ್ರಕೃತಿ ನಿಯಮ ಎಂದೂ ಹೇಳಬಹುದು. ಇಲ್ಲಿ ತಂದೆ ತಾಯಿ, ಮಕ್ಕಳದ್ದು ಸೇರಿದಂತೆ ಯಾರದ್ದೂ ತಪ್ಪಿಲ್ಲ. ಇದನ್ನ ನಾವು ಸ್ವೀಕರಿಸಲೇ ಬೇಕು” ಎಂದು ಹೇಳಿದರು.

“ನಮ್ಮ ಆರೋಗ್ಯ ಇಲಾಖೆ ಇಡೀ ದೇಶದಲ್ಲಿಯೇ ಕ್ರಾಂತಿ ಮಾಡುತ್ತಿದೆ. ದಿನೇಶ್‌ ಅವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಜನರು ಎದ್ದುನಿಂತು ಚಪ್ಪಾಳೆ ಹೊಡೆಯಬೇಡಿ ಬದಲಾಗಿ. ಮತ್ತೆ ಇದೇ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವದಿಸಿ. ಆಗ ಇನ್ನೂ ಹೆಚ್ಚಿನ ಸೇವೆ ಮಾಡುತ್ತೇವೆ. ಸರ್ಕಾರವೇ ರೋಗಿಗಳ ನೋವಿಗೆ ಜೊತೆಯಾಗಬೇಕು ಎಂದು ದಿನೇಶ್‌ ಗುಂಡುರಾವ್‌ ಅವರು ಸಂಪುಟದಲ್ಲಿ ಈ ವಿಚಾರ ಮಂಡಿಸಿ ಸಹಾಯಕ್ಕೆ ನಿಂತಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌ ಅವರು ಜೊತೆಯಾಗಿದ್ದಾರೆ” ಎಂದರು.

ಕರ್ನಾಟಕದಿಂದ ಪ್ರತಿವರ್ಷ 13,940 ವೈದ್ಯರು ಹೊರಬರುತ್ತಿದ್ದಾರೆ

“ನಮ್ಮ ಕರ್ನಾಟಕ ರಾಜ್ಯದಿಂದ ಪ್ರತಿವರ್ಷ 13,940 ವೈದ್ಯರು ತಯಾರಾಗುತ್ತಿದ್ದಾರೆ. ಸುಮಾರು 3 ಸಾವಿರ ವೈದ್ಯರು ಎಂಡಿ ಪದವಿ ಪಡೆಯುತ್ತಿದ್ದಾರೆ. 70 ಮೆಡಿಕಲ್‌ ಕಾಲೇಜು ಹೊಂದಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮೆಡಿಕಲ್‌ ಕಾಲೇಜುಗಳಿವೆ. ಸುಮಾರು 1 ಲಕ್ಷ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಪ್ರತಿವರ್ಷ ಸೇವೆಗೆ ಸಜ್ಜಾಗುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡುವ ಉಪಸಮಿತಿಯ ಅಧ್ಯಕ್ಷನಾಗಿದ್ದೆ. ಆಗ ಕೇಳಿದ ಎಲ್ಲರಿಗೂ ಅನುಮತಿ ನೀಡಲಾಯಿತು. ಅಂದು ಮಾಡಿದ ತೀರ್ಮಾನ ಇಂದು ಫಲ ಕಾಣುತ್ತಿದೆ. ಅಸ್ಸಾಂ, ಕೇರಳ ಸೇರಿದಂತೆ ದೇಶದ ಅನೇಕ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

“ಮಾನವನ ಸೇವೆ ಮಾಡುವುದು ನಮ್ಮ ಸರ್ಕಾರದ ಬದ್ಧತೆ. ಆರೋಗ್ಯ ಕ್ಷೇತ್ರದ ಬೇಡಿಕೆಗೆ ನಮ್ಮ ಸರ್ಕಾರ ಎಂದಿಗೂ ಹಿಂದೇಟು ಹಾಕಿಲ್ಲ. ಇಂತಹ ಅಪರೂಪದ ಖಾಯಿಲೆಯಿಂದ ಬಳಲುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬಬೇಕು. ಮಕ್ಕಳು ಡಿ.ಕೆ.ಶಿವಕುಮಾರ್‌, ದಿನೇಶ್‌ ಗುಂಡುರಾವ್‌ ಆಗುವಂತೆ ಬೆಳೆಯಬೇಕು. ಯಾವುದೂ ಅಸಾಧ್ಯವಲ್ಲ. ದೇವರು ಅವಕಾಶ ನೀಡುತ್ತಾನೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.

“ಪ್ರಪಂಚದ ಯಾವುದೇ ದೇಶಕ್ಕೆ ಹೋದರು ನಮ್ಮ ಕರ್ನಾಟಕದ ವೈದ್ಯರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆಯಾ ದೇಶದ ಜನರು ಆಡಳಿತ ನಡೆಸುತ್ತಿರಬಹುದು ಆದರೆ ಬುದ್ದಿವಂತಿಕೆ, ಸೇವೆ ಸೇರಿದಂತೆ ಇತರೇ ವಿಭಾಗದಲ್ಲಿ ನಮ್ಮ ವೈದ್ಯರು ಸಾಧನೆ ಮಾಡಿದ್ದಾರೆ” ಎಂದರು.

“ಕರ್ನಾಟಕ ತನ್ನದೇ ಆದ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ನಮ್ಮ ಸರ್ಕಾರವೂ ಸಹ ಯುವಕರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದಾಯಕವಾಗಿ ನಿಂತಿದೆ. ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ 5 ಸಾವಿರ ಹಣವನ್ನು ಉಳಿತಾಯ ಮಾಡುತ್ತಿದೆ. ಸರ್ಕಾರಕ್ಕೆ ಹೊರೆ ಆಗುತ್ತಿರಬಹುದು ಆದರೆ ಜನರ ಮೇಲಿರುವ ಆರ್ಥಿಕ ಒತ್ತಡ, ಮಾನಸಿಕ ಒತ್ತಡ ಕಡಿಮೆಯಾಗಬೇಕು ಎಂದು ನಾವು ಕೆಲಸ ಮಾಡುತ್ತಿದ್ದೇವೆ. ಜೇಬಲ್ಲಿ 10 ರೂಪಾಯಿ ಹೆಚ್ಚಿದ್ದರೆ ಅದು ಆತ್ಮವಿಶ್ವಾಸ ಜಾಸ್ತಿ ಮಾಡುತ್ತದೆ” ಎಂದು ತಿಳಿಸಿದರು.

“ನಾವು ಪ್ರತಿದಿನ ದೀಪ ಬೆಳಗಿಸುವಾಗ ಶುಭವಾಗಲಿ ಆರೋಗ್ಯ ದೊರಕಲಿ ಎಂದು ಬೇಡಿ ಕೊಳ್ಳುತ್ತೇವೆ. ಅದೇ ರೀತಿ ಎಲ್ಲರ ಬಾಳಲ್ಲೂ ಶುಭವಾಗಲಿ. ಈ ನಿಮ್ಮ ಕಾಂಗ್ರೆಸ್‌ ಸರ್ಕಾರ ಸದಾ ನೊಂದವರ ಜೊತೆಯಲ್ಲಿ ಇರುತ್ತದೆ. ಎಲ್ಲಾ ವರ್ಗದ ಜನರಿಗೂ ಸ್ಪಂದಿಸುತ್ತದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments