ಕಾನೂನು ಬಾಹಿರವಾಗಿ, ರಾಜಕೀಯ ಪ್ರಭಾವ ಬಳಸಿ ಐದು ಎಕರೆ ಜಮೀನು ಕಬಳಿಸಿದ್ದ ಖರ್ಗೆ ಕುಟುಂಬ ಕಾನೂನು ಕುಣಿಕೆಯಿಂದ ಪಾರಾಗಲು ಈಗ ಜಮೀನು ವಾಪಸ್ ನೀಡಿದೆ ಎಂದು ಜೆಡಿಎಸ್ ಟೀಕಿಸಿದೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಜೆಡಿಎಸ್, “ಈ ಅಕ್ರಮಗಳ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿತ್ತು. ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕುಟುಂಬದವರು ಈಗ ಅಕ್ರಮವಾಗಿ ಕಬಳಿಸಿದ್ದ ಸಿಎ ನಿವೇಶನವನ್ನ ಕೆಐಎಡಿಬಿಗೆ ವಾಪಸ್ ನೀಡಿದ್ದಾರೆ. ಭ್ರಷ್ಟರು ಕಬಳಿಸಿದ್ದು ವಾಪಸ್ ಮಾಡಿದರೇ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ” ಎಂದು ಪ್ರಶ್ನಿಸಿದೆ.
“ಮುಡಾ ಹಗರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಕಳಂಕಿತ ಸಿಎಂ ಸಿದ್ದರಾಮಯ್ಯ ಕಾನೂನು ಸುರುಳಿ ಬಿಗಿಯಾಗುತ್ತಿದ್ದಂತೆ ಈಗ ಖರ್ಗೆ ಕುಟುಂಬಕ್ಕೂ ಕಾನೂನಿನ ಭಯ ಶುರುವಾಗಿದೆ” ಎಂದಿದೆ.
” ‘ಕೆಟ್ಟ ಮೇಲೆ ಬುದ್ಧಿ ಬಂತು’ ಅಲ್ಲವೇ ಖರ್ಗೆ ಅವರೇ..? ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು. ಕಳ್ಳ ಕದ್ದ ಮಾಲು ವಾಪಸ್ ಕೊಟ್ಟ ತಕ್ಷಣ ಆತನಿಗೆ ವಿನಾಯಿತಿ ಸಾಧ್ಯವಿಲ್ಲ. ತನಿಖೆ ಎದುರಿಸಲೇಬೇಕು” ಎಂದು ಆಗ್ರಹಿಸಿದೆ.