Homeದೇಶತಿರುಪತಿ ದೇವಸ್ಥಾನದಲ್ಲಿ ಹಿಂದೂಗಳಿಗಷ್ಟೇ ಕೆಲಸ, 2-3 ಗಂಟೆಯಲ್ಲೇ ದೇವರ ದರ್ಶನ: ಟಿಟಿಡಿ ನಿರ್ಧಾರ

ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳಿಗಷ್ಟೇ ಕೆಲಸ, 2-3 ಗಂಟೆಯಲ್ಲೇ ದೇವರ ದರ್ಶನ: ಟಿಟಿಡಿ ನಿರ್ಧಾರ

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು ತಿರುಮಲ ದೇವಾಲಯದ ನಿರ್ವಹಣೆ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ಬಿ ಆರ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಚೊಚ್ಚಲ ಸಭೆ ನಡೆದಿದ್ದು, ದೇವರ ದರ್ಶನ ಸೇರಿದಂತೆ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಭಕ್ತರಿಗೆ ಶುಭ ಸುದ್ದಿ ನೀಡಿದೆ.

ತಿರುಮಲೇಶನ ದರ್ಶನಕ್ಕೆ ಇನ್ನು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಕಡಿಮೆಯಾಗಲಿದೆ. ತಿರುಮಲ ದೇವಾಲಯದ ಆವರಣದಲ್ಲಿ ರಾಜಕೀಯ ಚರ್ಚೆಗಳನ್ನು ನಿಷೇಧಿಸಿ ಟಿಟಿಡಿ ಮಂಡಳಿ ನಿರ್ಧಾರ ಕೈಗೊಂಡಿದೆ.

“ದೇವಾಲಯವು ಆಧ್ಯಾತ್ಮಿಕತೆಯ ಮೇಲೆ ಕೇಂದ್ರೀಕರಿಸಬೇಕು ಮತ್ತು ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು. ರಾಜಕೀಯ ವಿಷಯಗಳ ಮೇಲಿನ ನಿಷೇಧ ಮುಂದುವರಿಯಲಿದೆ. ತಿರುಮಲದ ಅತಿಥಿ ಗೃಹಗಳಿಗೆ ವೈಯಕ್ತಿಕ ಅಥವಾ ರಾಜಕೀಯ ಹೆಸರುಗಳನ್ನು ಇಡಬಾರದು” ಎಂದು ಟಿಟಿಡಿ ನಿರ್ಧರಿಸಿದೆ.

ಇನ್ಮುಂದೆ ಸಾಧ್ಯವಾದಷ್ಟು ಬೇಗ ಭಕ್ತರಿಗೆ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು . ದೀರ್ಘ ಸಮಯ ಕಾಯುವ ಬಗ್ಗೆ ಬಂದಿರುವ ದೂರಗಳನ್ನು ಗಂಭೀರವಾಗಿ ಪರಿಗಣಿಸಿ ಟಿಕೆಟ್ ಹೊಂದಿರುವ ಭಕ್ತರು 2-3 ಗಂಟೆಗಳಲ್ಲಿ ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಲಾಗುವುದು” ಎಂದು ಟಿಟಿಡಿ ಘೋಷಿಸಿದೆ.

ಸಾಮಾನ್ಯ ಭಕ್ತರಿಗೆ ಶೀಘ್ರವಾಗಿ ತಿರುಮಲೇಶನ ದರ್ಶನ ಕಲ್ಪಿಸಲು ಅಗತ್ಯವಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವರ್ಚುವಲ್ ಕ್ಯೂ ವ್ಯವಸ್ಥೆ ರೂಪಿಸಿ ಕೇವಲ ಎರಡು ಮೂರು ಗಂಟೆಗಳಲ್ಲಿ ತಿರುಮಲ ಶ್ರೀನಿವಾಸನ ದರ್ಶನ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಟಿಟಿಡಿ ಇಒ ಶ್ಯಾಮಲರಾವ್ ತಿಳಿಸಿದ್ದಾರೆ.
ಶಾರದಾ ಪೀಠದ ಗುತ್ತಿಗೆ ಒಪ್ಪಂದ ರದ್ದು

ವಿಶಾಖಪಟ್ಟಣದಲ್ಲಿರುವ ಶಾರದಾ ಪೀಠದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಲು ಟಿಟಿಡಿ ಮಂಡಳಿ ನಿರ್ಧರಿಸಿದೆ. ಹೆಚ್ಚುವರಿಯಾಗಿ, ಶಾರದಾ ಪೀಠದ ಕಟ್ಟಡವನ್ನು ನೇರವಾಗಿ ನಿರ್ವಹಿಸಲು ಟಿಟಿಡಿ ಸಂಪೂರ್ಣ ನಿಯಂತ್ರಣವನ್ನು ವಹಿಸಿಕೊಳ್ಳಲು ಉದ್ದೇಶಿಸಿದೆ.

ಹಿಂದೂಗಳಿಗೆ ಮಾತ್ರ ಕೆಲಸ

ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಸಿಬ್ಬಂದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ನಿರ್ಧರಿಸಿದೆ.

“ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿರಬೇಕು. ಟಿಟಿಡಿಯು ಹಿಂದೂ ದತ್ತಿ ಸಂಸ್ಥೆಯಾಗಿರುವುದರಿಂದ ಹಿಂದೂಯೇತರರು ಸಿಬ್ಬಂದಿಯಾಗಿ ಮುಂದುವರಿಯಲು ಅವಕಾಶ ನೀಡುವುದಿಲ್ಲ” ಎಂದು ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಿ.ಆರ್.ನಾಯ್ಡು ಈ ಹಿಂದೆ ಘೋಷಿಸಿದ್ದರು.

“ಇತರ ಧರ್ಮಕ್ಕೆ ಸೇರಿದ ಸಿಬ್ಬಂದಿಯನ್ನು ಸರ್ಕಾರದ ಇತರ ಇಲಾಖೆಗಳಿಗೆ ನಿಯುಕ್ತಿಗೊಳಿಸುವ ಅಥವಾ ಸ್ವಯಂ ನಿವೃತ್ತಿಗೆ (ವಿಆರ್‌ಎಸ್) ಅವಕಾಶ ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು” ಎಂದಿದ್ದರು.

ಆದ್ದರಿಂದ ತನ್ನ ಮೊದಲ ಸಭೆಯಲ್ಲೇ ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆ. “ತಿರುಮಲದಲ್ಲಿ ಯಾವುದೇ ರೀತಿಯ ರಾಜಕೀಯ ಹೇಳಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅಂತಹ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವವರ ವಿರುದ್ಧ ಅಗತ್ಯಬಿದ್ದರೆ ಕಾನೂನುಬದ್ಧವಾಗಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ನಾಯ್ಡು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments