ಭಾರತ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ. ಚುನಾವಣೆಗಾಗಿ ತೈಲ ಬೆಲೆ ಕಡಿಮೆ ಮಾಡಿದ್ದಾರೆ. ನಯಾರ ಕಂಪನಿಯವರು ಇಂಧನ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹರಿಹಾಯ್ದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಕೇಂದ್ರ ಸರ್ಕಾರ ಇಂಧನ ತೈಲದ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ (special additional excise duty) ಇಳಿಕೆ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಶುಕ್ರವಾರ ಈ ರೀತಿ ಪ್ರತಿಕ್ರಿಯೆ ನೀಡಿದರು.
ರಾಜ್ಯ ಸರ್ಕಾರ ತೈಲ ಬೆಲೆ ಕಡಿಮೆ ಮಾಡಲಿದೆಯೇ ಎಂದು ಕೇಳಿದಾಗ, “ಆನಂತರ ಇದರ ಬಗ್ಗೆ ಮಾತನಾಡುತ್ತೇವೆ” ಎಂದರು.
ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು
ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುತ್ತವೆಯೇ ಎಂದು ಕೇಳಿದಾಗ, “ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಬೇರೆ ಸಮುದಾಯಗಳೂ ಆಗುವುದಿಲ್ಲ. ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಅವರ ಮೊಮ್ಮಗ ಸಮರ್ಥ್ ಗೆಲ್ಲುತ್ತಾರೆ. ಅವರು ಸಾಕಿದಂತಹ ಮಗ. ಗೆಲ್ಲುತ್ತಾನೆ ಎನ್ನುವ ವಿಶ್ವಾಸವಿದೆ. ದಾವಣಗೆರೆಗೆ ಕೊಡುಗೆಯನ್ನು ಇಡೀ ರಾಜ್ಯ ನೋಡುವಂತೆ ಆ ಕುಟುಂಬ ಕೊಟ್ಟಿದೆ. ಜನ ಅವರನ್ನ ಸ್ಮರಿಸುತ್ತಿದ್ದಾರೆ”ಎಂದರು.
ಉಪಚುನಾವಣೆಯಲ್ಲಿ ಒಂದಷ್ಟು ಜನರ ಅಸಮಾಧಾನ ಹಾಗೂ ಅಮಾನತು ಬಗ್ಗೆ ಕೇಳಿದಾಗ, “ಅಮಾನತಿಗೆ ನಾನು ಸಹಿ ಹಾಕಿಲ್ಲ. ಸ್ಥಳೀಯವಾಗಿ ಇದು ಆಗಿದೆ. ನಾನು ಹಾಗೂ ಮುಖ್ಯಮಂತ್ರಿಯವರು ಇದರ ಬಗ್ಗೆ ಮಾತನಾಡಿದ್ದೇವೆ. ಈ ವಿಚಾರವನ್ನ ಬಹಿರಂಗಗೊಳಿಸುವುದಿಲ್ಲ. ಜಮೀರ್, ಜಬ್ಬಾರ್, ನಜೀರ್ ಅವರು ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಏನು ಹೇಳುತ್ತದೆಯೋ ಅದನ್ನು ಕೇಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಪೈಲ್ವಾನ್, ಉಸ್ತಾದ್ ಇರಬಹುದು ಎಲ್ಲರೂ ನಮ್ಮವರೇ. ಚುನಾವಣೆ ಸಮಯದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ನಾವು ಅದನ್ನು ನಿಭಾಯಿಸುತ್ತೇವೆ” ಎಂದು ಹೇಳಿದರು.
ಐಪಿಎಲ್ ಟಿಕೆಟ್ ವಿಚಾರ ಕೆಎಸ್ ಸಿಎ ಅಧ್ಯಕ್ಷರ ಜತೆ ಚರ್ಚೆ
ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕರ ಬೇಡಿಕೆ ಬಗ್ಗೆ ಕೇಳಿದಾಗ, “ಶಾಸಕರಿಗೆ ಹಕ್ಕಿದೆ. ಏಕೆಂದರೆ ಅವರು ಸರ್ಕಾರ ಹಾಗೂ ವ್ಯವಸ್ಥೆಯ ಭಾಗ. ಈಗ ನಾವು ಒತ್ತಡಗಳ ಮಧ್ಯೆ ಪಂದ್ಯ ಆಯೋಜನೆಗೆ ಅನುಮತಿ ನೀಡಿದ್ದೇವೆ. ನಾನು ಕೆಎಸ್ ಸಿಎ ಸದಸ್ಯನಾಗಿರಬಹುದು. ಅದು ಬೇರೆ ಪ್ರಶ್ನೆ. ನಮ್ಮ ಶಾಸಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಕೆಎಸ್ ಸಿಎ ಅಧ್ಯಕ್ಷರೊಂದಿಗೆ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.
ತೇಜಸ್ವಿಸೂರ್ಯ ಅವರು ಇದು ಅವಶ್ಯಕತೆ ಇರಲಿಲ್ಲ ಎಂದು ಹೇಳಿರುವ ಬಗ್ಗೆ ಕೇಳಿದಾಗ, ” ತೇಜಸ್ವಿ ಸೂರ್ಯ ಅವರ ಪಕ್ಷದ ನಾಯಕರಿಗೆ ಜ್ಞಾನ ನೀಡಲಿ. ನಮಗಲ್ಲ” ಎಂದರು.


