ರೈತರಿಗೆ ಬೀಜ ಗೊಬ್ಬರದ ಕೊರತೆ ಆಗಬಾರದು. ಕೊರತೆ ಆದರೆ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಇತ್ಯಾದಿ ಅಗತ್ಯಗಳ ಸಂಗ್ರಹದ ಪ್ರಮಾಣ ಎಷ್ಟಿದೆ ಎನ್ನುವ ಕುರಿತಂತೆ ಒಂದೊಂದಾಗಿ ಮಾಹಿತಿ ಪಡೆದು ಒಮ್ಮೆ ಕೊಟ್ಟ ಬೀಜ ಮೊಳಕೆಯೊಡೆಯದಿದ್ದರೆ ಎರಡನೇ ಸುತ್ತು ಕೂಡ ಬೀಜಗಳನ್ನು ಕಡ್ಡಾಯವಾಗಿ ರೈತರಿಗೆ ವಿತರಿಸಬೇಕು. ರೈತರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ” ಎಂದು ಎಚ್ಚರಿಸಿದರು.
“ಉಪ ರೈತ ಸಂಪರ್ಕಗಳನ್ನು ಹೆಚ್ಚೆಚ್ಚು ತೆರೆದು ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲು ಏನು ಸಮಸ್ಯೆ” ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಹಗರಿಬೊಮ್ಮನಹಳ್ಳಿ ಸೇರಿ ನಾನಾ ತಾಲ್ಲೂಕುಗಳಲ್ಲಿ ಈ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಬರ ಪರಿಹಾರ 130 ಕೋಟಿ ವಿತರಣೆ
ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ 130 ಕೋಟಿ ರೂಪಾಯಿಗಳನ್ನು ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಅಧಿಕಾರಿಗಳು ದಾಖಲೆ ಮುಂದಿಟ್ಟು ವಿವರಿಸಿದರು.
ತರಾಟೆ ತೆಗೆದುಕೊಂಡ ಸಿಎಂ
2023-24 ರಲ್ಲಿ ಒಟ್ಟು 34 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾಲಿನಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಪ್ರಶ್ನಿಸಿದರು. ಉಳಿದೆಲ್ಲರಿಗೂ ಸರಿಯಾದ ಸಮಯಕ್ಕೆ ಆತ್ಮಹತ್ಯೆ ಪರಿಹಾರದ 5 ಲಕ್ಷ ಮೊತ್ತ ಜಮೆ ಆಗಿದೆ. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ ೨೦ ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡೆವಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆಗಿ ತರಾಟೆಗೆ ತೆಗೆದುಕೊಂಡರು. ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ ಎಂದು ಎಚ್ಚರಿಸಿದರು.
ಸರ್ಕಾರ ಹಣ ಕೊಟ್ಟಿದೆ: ರೈತರಿಗೆ ತಲುಪಿಸಲು ಏನು ತೊಂದರೆ
“ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ಕೊಟ್ಟು ಯಾವ ಕಾಲ ಆಯ್ತು. ಆದರೂ ಸರ್ಕಾರ ಕೊಟ್ಟ ಹಣವನ್ನು ರೈತರ ಕುಟುಂಬಗಳಿಗೆ ತಲುಪಿಸಲು ಏನು ತೊಂದರೆ ಆಗಿದೆ ಎಂದು ಪ್ರಶ್ನಿಸಿದ ಸಿಎಂ ಇದನ್ನು ಸಹಿಸುವುದಿಲ್ಲ”ಎಂದರು.
DDPI ಮತ್ತು BEO ಅಮಾನತ್ತಿಗೆ ಸಿಎಂ ಸೂಚನೆ
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10 ನೇ ಸ್ಥಾನದಿಂದ ೨೭ ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಕ್ಕಾಪಟ್ಟೆ ಸಿಟ್ಟಾದ ಸಿಎಂ, ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಎಸ್ಎಸ್ಎಸ್ಸಿ ಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಿಲಿತಾಂಶ ಪ್ರಮಾಣ ಕುಸಿದಿರುವುದಕ್ಕೆನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪಡೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು. ಈ ಬಾರಿ ಶೇ೨೦ ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಪ್ರಶ್ನಿಸಿದರು.
ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್, ಲತಾ ಎಂ.ಪಿ.ಪ್ರಕಾಶ್, ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.