ಅಶ್ಲೀಲ ವಿಡಿಯೊ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ಅಮಾನತುಗೊಳಿಸಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಮಾನತುಗೊಳಿಸಲು ಒಮ್ಮತದ ತೀರ್ಮಾನಗೊಂಡು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ತಿಳಿಸಲಾಯಿತು.
ತಕ್ಷಣ ಅಮಾನತುಗೊಳಿಸಿ ದೇವೇಗೌಡರು ಆದೇಶ (ಫ್ಯಾಕ್ಸ್ ಮೂಲಕ) ಹೊರಡಿಸಿದರು. ಆದೇಶ ಪ್ರತಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರದರ್ಶಿಸಿದರು.
“ಎಸ್‌ಐಟಿ ತನಿಖೆಯ ವರದಿ ಬರುವವರೆಗೆ ಪಕ್ಷದಿಂದ ಅಮಾನತು ಮಾಡಲಾಗುತ್ತದೆ. ಒಂದು ವೇಳೆ ಎಸ್‌ಐಟಿ ತನಿಖೆಯಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಸಾಬೀತಾದರೆ ಶಾಶ್ವತವಾಗಿ ಅಮಾನತು ಮಾಡಲಾಗುತ್ತಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
“ಪ್ರಜ್ವಲ್ ಮೇಲಿನ ಎಸ್ ಐ ಟಿ ತನಿಖೆಯನ್ನು ಸ್ವಾಗತ ಮಾಡಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಕಮಿಟಿಯಲ್ಲಿ ತೀರ್ಮಾನವಾಗಿದೆ. ಪಕ್ಷದಿಂದ ಅಮಾನತು ಮಾಡಲು ದೇವೆಗೌಡರಿಗೆ ಶಿಫಾರಸು ಮಾಡಲಾಗಿತ್ತು. ಅವರು ತಕ್ಷಣದಿದಲೇ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ. ಎಷ್ಟು ದಿನ ಅಂತ ಇಲ್ಲ. ನಾನು ರಣಹೇಡಿ ಅಲ್ಲ. ಪ್ರತಿಭಟನೆ ಮಾಡಿ ನಮ್ಮನ್ನು ಹೆದರಿಸಿದ್ರೆ, ನಾನು ನಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟ್ರೆ ನಾಳೆ ನೀವು ಬೀದಿಯಲ್ಲಿ ಓಡಾಡೋಕೆ ಆಗಲ್ಲ” ಎಂದರು.