Homeಅಭಿಮನ್ಯುನುಡಿ ನಮನ | ಶೋಷಿತರು, ಹಿಂದುಳಿದವರ ಅದಮ್ಯ ಚೇತನ ಜೆ ಶ್ರೀನಿವಾಸನ್

ನುಡಿ ನಮನ | ಶೋಷಿತರು, ಹಿಂದುಳಿದವರ ಅದಮ್ಯ ಚೇತನ ಜೆ ಶ್ರೀನಿವಾಸನ್

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಚಳವಳಿ ಕಟ್ಟುವಲ್ಲಿ ಮತ್ತು ದಮನಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಹೋರಾಟದಲ್ಲಿ ಜೆ ಶ್ರೀನಿವಾಸನ್‌ ಅವರ ಪಾತ್ರ ಬಹುದೊಡ್ಡದು. ಸಣ್ಣ ಸಮುದಾಯದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ವಿಶೇಷ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಯವರೆಗೂ ಏರಿ, ನಿವೃತ್ತರಾದ ಬಳಿಕವೂ ಹಿಂದುಳಿದ ವರ್ಗಗಳ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದ ಹಿರಿಯ ಜೀವ ನಮ್ಮನ್ನು ಅಗಲಿದೆ. ಅಗಲಿದ ಹಿರಿಯ ಜೀವಕ್ಕೆ 'ಅಭಿಮನ್ಯು' ಬಳಗದಿಂದ ನುಡಿ ನಮನ. ಅವರ ಹೋರಾಟದ ಹಾದಿ ನಮ್ಮೆಲ್ಲರಿಗೂ ಆದರ್ಶವಾಗಬೇಕಿದೆ.

ಅವರು ಅಕ್ಷರಶಃ ಸಮಾಜಮುಖಿ. ಶೋಷಿತರು, ದೀನ-ದಲಿತರು, ಹಿಂದುಳಿದವರು.. ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯೆಡೆಗೆ ಅವರದು ನಿರಂತರ ತುಡಿತ. ಜೀವನದ ಕಡೆ ಕ್ಷಣದವರೆಗೂ ಹಿಂದುಳಿದವರ ಪರ ಹೋರಾಟ, ಸಂಘಟನೆಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡವರು. ಅವರೇ ಜೆ ಶ್ರೀನಿವಾಸನ್.

ಕೊಳ್ಳೇಗಾಲದ ಮಧ್ಯಮವರ್ಗದ ಕುಟುಂಬದಿಂದ ಬಂದ ಜೆ ಶ್ರೀನಿವಾಸನ್ ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾದವರು. ಊರಿನಲ್ಲಿ ಸ್ವಲ್ಪ ಜಮೀನಿದ್ದರೂ, ತಂದೆ ಸರಕಾರಿ ನೌಕರಿಯಲ್ಲಿದ್ದರಿಂದ, ಕೃಷಿ ಕೆಲಸದತ್ತ ನೋಡದೆ, ಸರಕಾರಿ ನೌಕರಿಯತ್ತ ಗಮನ ಹರಿಸಿದರು.

ಎಸ್‌ಎಸ್‌ಎಲ್‌ಸಿವರೆಗೆ ಕೊಳ್ಳೇಗಾಲದಲ್ಲಿ ಓದಿ, ನಂತರ ಮೈಸೂರಿನಲ್ಲಿ ಪದವಿ ಪಡೆದರು. ಮನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡುವಾಗಲೇ, ಸರಕಾರಿ ಕೆಲಸ ಸಿಕ್ಕಿದ್ದರಿಂದ, ಓದನ್ನು ಅರ್ಧಕ್ಕೆ ನಿಲ್ಲಿಸಿ ನೌಕರಿಗೆ ಸೇರಿಕೊಂಡರು.

ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ, ಪ್ರತಿಭಟನೆ, ಹೋರಾಟ, ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಶ್ರೀನಿವಾಸನ್, ಸಹಜವಾಗಿಯೇ ಸಮಾಜಮುಖಿ ತತ್ವ ಸಿದ್ಧಾಂತಗಳತ್ತ ಆಕರ್ಷಿತರಾಗಿ ಹಿಂದುಳಿದವರ ಪರ ನಿಂತವರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 1971ರಲ್ಲಿ ಗೆಜೆಟೆಡ್ ಆಫೀಸರ್ ಹುದ್ದೆಗೆ ಆಯ್ಕೆಯಾಗಿ, ಪುತ್ತೂರಿನ ತಹಶೀಲ್ದಾರ್ ಆಗಿ ನೇಮಕಗೊಂಡರು. ಆನಂತರ ಸಾಗರ, ತುಮಕೂರಿನಲ್ಲಿ ಎಸಿ, ಬೆಂಗಳೂರಿನಲ್ಲಿ ಡಿಸಿಯಾಗಿ ಸೇವೆ ಸಲ್ಲಿಸಿದರು.1991ರಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಜೆ ಶ್ರೀನಿವಾಸನ್ ನಿವೃತ್ತರಾದರು.

ಸರಕಾರಿ ಸೇವಾವಧಿಯ ನಂತರ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡ ಜೆ ಶ್ರೀನಿವಾಸನ್, ಹಿಂದುಳಿದವರ ಫೆಡರೇಷನ್ ಹುಟ್ಟು ಹಾಕಿದರು. ಹಿಂದುಳಿದ ಜಾತಿ ಜನಾಂಗಗಳ ಸಮನ್ವಯ ಸಮಿತಿ ಕಟ್ಟಿ, ಮಂಡಲ್ ವರದಿ ಪರ ಸಂವಾದ, ಚರ್ಚೆ ಹಾಗೂ ಹೋರಾಟದಲ್ಲಿ ಭಾಗಿಯಾದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದರು.

ದೇವರಾಜ ಅರಸು ಶತಮಾನೋತ್ಸವ ಸಮಿತಿ ಸದಸ್ಯರಾಗಿ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು, ಅಂಕಿ-ಅಂಶಗಳನ್ನು, ವರದಿಗಳನ್ನು ಸಿದ್ಧಪಡಿಸುತ್ತ ಹಾಗೂ ಕಾಲಕಾಲಕ್ಕೆ ಸರಕಾರಕ್ಕೆ ಬೇಕಾದ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡುತ್ತ ನಿವೃತ್ತ ಬದುಕನ್ನು ಸದುಪಯೋಗಪಡಿಸಿಕೊಂಡರು. ರಾಜ್ಯದ ತೀರಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾಗಿ ಶೋಷಿತ ಸಮುದಾಯಗಳ ಸಂಘಟನೆಗೆ ವಿಶೇಷ ಒತ್ತು ನೀಡಿದರು. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಸದಾ ಕಾಲ ಅವರು ಹಿಂದುಳಿದವರ ಏಳಿಗೆಯನ್ನೇ ಬಯಸಿದರು.

“ನಾನೊಬ್ಬ ಸಾಮಾನ್ಯ ಅಧಿಕಾರಿ. ನನ್ನ ಸೇವಾವಧಿಯಲ್ಲಿ ಅರಸು ಅವರ ಸಂಪರ್ಕಕ್ಕೆ ಬಂದು, ಅವರ ಮೇರು ವ್ಯಕ್ತಿತ್ವಕ್ಕೆ ಮಾರುಹೋದವನು. ಅವರ ಜನಪರ ಕೆಲಸಗಳಿಂದ ಪ್ರಭಾವಿತನಾದವನು. ಅವರಲ್ಲಿದ್ದ ಮಾನವೀಯತೆಗೆ ಮನಸೋತವನು. ಸರಕಾರಿ ಅಧಿಕಾರಿಯಾಗಿದ್ದು, ಕಾನೂನು ಕಾಯ್ದೆಗಳಡಿ ಕೆಲಸ ಮಾಡುತ್ತಲೇ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಬಳಸುವುದನ್ನು ಅವರಿಂದ ಕಲಿತವನು. ಮತ್ತು ಅವರು ಕಂಡ ಕನಸನ್ನು ನನ್ನ ಕೈಲಾದಷ್ಟು ನನಸು ಮಾಡಲು ಇಂದಿಗೂ ಆ ಮಾರ್ಗದಲ್ಲಿಯೇ ನಡೆಯುತ್ತಿರುವವನು:” ಹೀಗೆಂದು ಜೆ ಶ್ರೀನಿವಾಸನ್ ಅವರು ಅರಸು ಅವರ ಸಂಪರ್ಕಕ್ಕೆ ಬಂದ ದಿನಗಳನ್ನು ಅವರ ಪ್ರಭಾವಕ್ಕೆ ಒಳಗಾದ ಬಗೆಯನು ಆಗಾಗ್ಗೆ ಸ್ಮೃತಿ ಪಟಲದಿಂದ ನೆನಪುಗಳನ್ನು ಹೊರಹಾಕುತ್ತಿದ್ದರು.

ನಿಜವಾದ ಮಣ್ಣಿನ ಮಗ ಯಾರು ಏನೇ ಹೇಳಲಿ, ಯಾರಿಗೆ ಎಂತಹ ಬಿರುದಾದರೂ ಇರಲಿ, ಜೆ ಶ್ರೀನಿವಾಸನ್ ಅವರ ಪ್ರಕಾರ ನಿಜವಾದ ಮಣ್ಣಿನ ಮಗ ದೇವರಾಜ ಅರಸು. ಅವರಿಗೆ ಬೇಸಾಯ, ಬೆಳೆ, ಮಳೆ, ಮಾರುಕಟ್ಟೆ ಬಗ್ಗೆ ಅಪಾರ ಅನುಭವವಿತ್ತು. ಧುತ್ತೆಂದು ಎದುರಾಗುವ ಅತಿವೃಷ್ಟಿ-ಅನಾವೃಷ್ಟಿಗಳ ಬಗ್ಗೆ ಅರಿವಿತ್ತು. ಕೃಷಿ ಕುಟುಂಬಗಳ ಕಷ್ಟ-ನಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಹಾಗಾಗಿಯೇ ಅವರ ಬದುಕನ್ನು ಹಸನುಗೊಳಿಸಬೇಕೆಂದು ಹಗಲಿರುಳು ಚಿಂತಿಸುತ್ತಿದ್ದರು. ಅದಕ್ಕೊಂದು ಉತ್ತಮ ಉದಾಹರಣೆ ಭೂ ಸುಧಾರಣಾ ಕಾಯ್ದೆ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ಜೆ ಶ್ರೀನಿವಾಸನ್ ಅವರು ಸಾಗರದಲ್ಲಿ ಎಸಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಅರಸ ಅವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಸಾಗರ. ಗೇಣಿದಾರರ ಹೋರಾಟದ ಕರ್ಮಭೂಮಿ. ಗಣಪತಿಯಪ್ಪ, ಎಲ್.ಟಿ.ತಿಮ್ಮಪ್ಪ ಹೆಗಡೆ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೊಣಂದೂರು ಲಿಂಗಪ್ಪರಂತಹ ಘಟಾನುಘಟಿ ಹೋರಾಟಗಾರರ ಊರು. ಇವರಲ್ಲಿ ಕೆಲವರು ಶಾಸಕರಾಗಿ ವಿರೋಧ ಪಕ್ಷದಲ್ಲಿದ್ದರು. ಆದರೆ ಅರಸು ಅವರು ಗೇಣಿ ಕಾಯ್ದೆ ಪರವಿದ್ದರು.

ಆಗ ಅಧಿಭೋಗದಾರಿಕೆ (ಆಕ್ಯುಪೇಷನ್ ರೈಟ್)ಗಾಗಿ ಅರ್ಜಿ ಹಾಕಲು ಸರಕಾರ ಗೇಣಿದಾರರಿಗೆ ಸೂಚಿಸಿತ್ತು. ಅದರಂತೆ ಗೇಣಿದಾರ ರೈತರು ಅರ್ಜಿ ಹಾಕಿದ್ದರು. ಆಗ ದೇವರಾಜ ಅರಸು ಅವರ ಸರಕಾರದಿಂದ ಅಧಿಕಾರಿಗಳಿಗೆ ಒಂದು ಖಡಕ್ ಸಂದೇಶ ರವಾನೆಯಾಗಿತ್ತು. ಅದೇನೆಂದರೆ, ಗೇಣಿದಾರರು ಹಾಕಿದ ಅರ್ಜಿ, ಒಂದೇ ಒಂದು ಅರ್ಜಿ ತಿರಸ್ಕೃತಗೊಂಡರೂ ಸರಿ, ಸರಕಾರಕ್ಕೆ ಆ ತಕ್ಷಣ ವರದಿ ಕಳುಹಿಸಬೇಕು ಎಂದು. ಇಂತಹ ಖಡಕ್ ಆದೇಶವನ್ನು ಇಲ್ಲಿಯವರೆಗಿನ ಯಾವ ಸರಕಾರದಿಂದ ಕಾಣಲೂ ಇಲ್ಲ, ಕೇಳಲೂ ಇಲ್ಲ ಎಂದು ಅರಸು ವ್ಯಕ್ತಿತ್ವವನ್ನು ಸದಾ ಕಾಲ ನೆನೆಯುತ್ತಿದ್ದರು ಜೆ ಶ್ರೀನಿವಾಸನ್.

ಬಂಗಾರಪ್ಪನವರ ಆಶ್ರಯ ಆರಾಧನಾ ಯೋಜನೆಗಳ ಜಾರಿಯಲ್ಲಿಯೂ ಜೆ ಶ್ರೀನಿವಾಸನ್ ಅವರ ಪಾತ್ರ ಅತ್ಯಂತ ದೊಡ್ಡದು. ಅರಸು ಅವರ ಆದರ್ಶಗಳ ಹಾದಿಯಲ್ಲೇ ಹಿಂದುಳಿದವರ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ಜೆ ಶ್ರೀನಿವಾಸನ್ ಅವರು ದಿನಾಂಕ ಮಂಗಳವಾರ (ಸೆ.17)ರಂದು ಮಂಗಳವಾರ ಇಹ ಲೋಕ ತ್ಯಜಿಸಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು.

ಕೆಲ ತಿಂಗಳುಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು; ಆಗಲೂ ಶೋಷಿತರ ಉದ್ಧಾರದ ಕುರಿತೇ ಚಿಂತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments