– ಈವರೆಗೂ ನಗರ ರಸ್ತೆ ಅಭಿವೃದ್ಧಿಗೆ 5065 ಕೋಟಿ ರೂ. ವೆಚ್ಚ
– ಜಿಬಿಎ ಲೋಗೋ, ಪಾಲಿಕೆಗಳ ಕಟ್ಟಡ ಮಾದರಿ ತೀರ್ಮಾನ
– 10 ಲಕ್ಷ ಆಸ್ತಿಗಳ ಸ್ಕ್ಯಾನಿಂಗ್ ಪೂರ್ಣ, ಏಪ್ರಿಲ್ 3ನೇ ಭಾನುವಾರ ದಾಖಲೆ ವಿತರಣೆ ಕಾರ್ಯಕ್ರಮ
ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 5065 ಕೋಟಿ ವೆಚ್ಚ ಮಾಡಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲಾ ರಸ್ತೆಗಳ ಬ್ಲಾಕ್ ಟಾಪಿಂಗ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಜಿಬಿಎ ಕಚೇರಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ಇಂದಿನ ಸಭೆಯಲ್ಲಿ ಜಿಬಿಎ ಚಿಹ್ನೆಯನ್ನು ಅಂತಿಮಗೊಳಿಸಲಾಗಿದ್ದು, ಆಯುಕ್ತರು ಅದನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಮಾದರಿ ಕಟ್ಟಡ ಅಂತಿಮಗೊಳಿಸಿದ್ದೇವೆ. ಆದಷ್ಟು ಬೇಗ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದೇನೆ. ಯಾವ ಶಾಸಕರು ಮಂತ್ರಿ ಬರಲಿ ಎಂದು ಕಾಯಬೇಡಿ, ನಿಮ್ಮ ಪಾಡಿಗೆ ನಿಮ್ಮ ಕೆಲಸ ಆರಂಭಿಸಿ, ಆಮೇಲೆ ಅವರನ್ನು ಕರೆದುಕೊಂಡು ಹೋಗಿ ಪೂಜೆ ಮಾಡಿಸಿ ಎಂದು ಹೇಳಿದ್ದೇನೆ. ಪ್ರತಿನಿತ್ಯ ಕಾಮಗಾರಿ ಪ್ರಗತಿ ಫೋಟೋ ಸಮೇತ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದ್ದು, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿದ್ದೇನೆ” ಎಂದು ಹೇಳಿದರು.
ಕಳೆದ 3 ತಿಂಗಳಲ್ಲಿ ನಗರ ರಸ್ತೆ ಅಭಿವೃದ್ಧಿಗೆ 2671 ಕೋಟಿ ರೂ.
“ಎರಡು ಪ್ಯಾಕೇಜ್ ಗಳಲ್ಲಿ ಹೊರ ವರ್ತುಲ ರಸ್ತೆಗೆ 420 ಕೋಟಿ, ವಾರ್ಡ್ ರಸ್ತೆಗಳಿಗೆ 82 ಪ್ಯಾಕೇಜ್ ಗಳಲ್ಲಿ 1000 ಕೋಟಿ, ಕರ್ನಾಟಕ ಸರ್ಕಾರದ ಅನುದಾನದ 81 ಪ್ಯಾಕೇಜ್ ಗಳಲ್ಲಿ 1241 ಕೋಟಿ ಸೇರಿದಂತೆ 2671 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿದೆ. ಈ ಕಾಮಗಾರಿ ಕೆಲಸಗಳು ತ್ವರಿತವಾಗಿ ಮಾಡಬೇಕು, ಮಳೆ ಆರಂಭವಾಗುವ ಮುನ್ನ ಎಲ್ಲಾ ಕೆಲಸ ಮುಗಿಸಬೇಕು ಎಂದು ಸೂಚಿಸಿದ್ದೇನೆ” ಎಂದರು.
“ಕಳೆದ ಮೂರು ತಿಂಗಳಲ್ಲಿ ಈ 2671 ಕೋಟಿ ರೂ. ಅನುದಾನ ನೀಡಲಾಗಿದ್ದು, 80% ಟೆಂಡರ್ ಕರೆಯಲಾಗಿದೆ. ಕಳೆದ ವರ್ಷ 389 ಕಿ. ಮೀ. ರಸ್ತೆಗಳ ಬ್ಲಾಕ್ ಟಾಪಿಂಗ್ ಗೆ 694 ಕೋಟಿ ರೂ. ಹಾಗೂ ವೈಟ್ ಟಾಪಿಂಗ್ ಗೆ 1700 ಕೋಟಿ ಸೇರಿ 2394 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿಶ್ವ ಬ್ಯಾಂಕ್ ನಿಂದ ಕೆನಾಲ್ ಲಿಂಕ್ ಲೈನಿಂಗ್ ಕೆಲಸಕ್ಕೆ 1600 ಕೋಟಿ ರೂ. ಟೆಂಡರ್ ಕರೆದು ಕೆಲಸ ಆರಂಭವಾಗಿದೆ” ಎಂದು ಹೇಳಿದರು.
10 ಲಕ್ಷ ಆಸ್ತಿಗಳ ಸ್ಕ್ಯಾನಿಂಗ್ ಪೂರ್ಣ, ಏಪ್ರಿಲ್ 3ನೇ ಭಾನುವಾರ ದಾಖಲೆ ವಿತರಣೆ ಕಾರ್ಯಕ್ರಮ
ಸುಮಾರು 10 ಲಕ್ಷಕ್ಕೂ ಹೆಚ್ಚು ನಾಗರೀಕರ ಆಸ್ತಿಗಳನ್ನು ಸ್ಕ್ಯಾನ್ ಮಾಡಿಸಿದ್ದು, ಒಂದೇ ದಿನ ಈ ನಾಗರಕರಿಗೆ ಇ ಖಾತಾ ನೀಡಲಾಗುವುದು. ಏಪ್ರಿಲ್ ತಿಂಗಳ ಮೂರನೇ ಭಾನುವಾರದಂದು ಈ ಕಾರ್ಯಕ್ರಮ ಮಾಡಲು ದಿನಾಂಕ ನಿಗದಿ ಮಾಡಿದ್ದೇನೆ.
ಬೆಂಗಳೂರು ನಗರದಲ್ಲಿ ಬಿ ಯಿಂದ ಎ ಖಾತಾ ಪರಿವರ್ತನೆ ಆರಂಭವಾಗಿದೆ. ಅವರ ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಖಾತಾ ಪರಿವರ್ತನೆ ಮಾಡಲಾಗುವುದು. ಎಲ್ಲಾ ಕಂದಾಯ ಜಾಗದಲ್ಲಿ ಮಾಡಲಾಗಿರುವ ಬಡಾವಣೆ ರಸ್ತೆಗಳನ್ನು ಪಾಲಿಕೆ ರಸ್ತೆಗಳನ್ನಾಗಿ ಮಾಡಿದ್ದೇವೆ.
2 ತಿಂಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಾಹನ ವಿತರಣೆ
ಇನ್ನು ಬೀದಿ ವ್ಯಾಪಾರಿಗಳು, ನಾಗರಕರಿಗೆ ಸಹಾಯ ಮಾಡುವ ಕಲ್ಯಾಣ ಯೋಜನೆಗಳನ್ನು ಪ್ರತಿ ಪಾಲಿಕೆಯಲ್ಲಿ ಪ್ರತ್ಯೇಕ ಕಾರ್ಯಕ್ರಮ ಮಾಡಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. 30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದು, ತಳ್ಳುವಗಾಡಿ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ನೀಡಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಬದಲು ವಾಹನಗಳಲ್ಲಿ ವ್ಯಾಪಾರ ಮಾಡುವಂತೆ ಮಾಡಲು ತೀರ್ಮಾನಿಸಿದ್ದೇವೆ. ಮುಂದಿನ 2 ತಿಂಗಳ ಒಳಗೆ ಈ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವಾಹನ ವಿತರಣೆ ಮಾಡಲಾಗುವುದು.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಭೂ ಸಂತ್ರಸ್ತರಿಗೆ ಪರಿಹಾರ ರೂಪವಾಗಿ ಕೆಲವು ಕಡೆ ಜಿಬಿಎ ವತಿಯಿಂದ ಟಿಡಿಆರ್ ನೀಡಬೇಕಾಗಿದೆ. ಪಾಲಿಕೆ ವತಿಯಿಂದ ಒಂದು ಕೇಂದ್ರ ಆರಂಭಿಸಿ ಸಂತ್ರಸ್ತರು ಅರ್ಜಿ ಕೊಟ್ಟ ಬಳಿಕ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಎರಡು ಮೂರು ದಿನಗಳಲ್ಲಿ ಟಿಡಿಆರ್ ನೀಡಲು ತೀರ್ಮಾನಿಸಲಾಗಿದೆ. ಟಿಡಿಆರ್ ವಿನಿಮಯ ಬಗ್ಗೆ ಮುಂದಿನ ಎರಡು ವಾರದಲ್ಲಿ ಮಾಹಿತಿ ನೀಡಲಾಗುವುದು.
ಇನ್ನು ಆಯಾ ಪಾಲಿಕೆಗಳಿಗೆ ಸಣ್ಣ ಪ್ರಮಾಣದ ಕಸ ಗುಡಿಸುವ ಯಂತ್ರ ಖರೀದಿಗೆ ಸೂಚಿಸಿದ್ದೇವೆ.
*ಕಸ ವಿಲೇವಾರಿಗೆ ಜಮೀನು ಖರೀದಿ ಮಾಡಲು ತೀರ್ಮಾನ*
ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ 40 ಕಿ.ಮೀ ಒಳಗೆ ಗುಡ್ಡ ಪ್ರದೇಶದ ಅಕ್ಕಪಕ್ಕ 100 ಎಕರೆ ಭೂಮಿ ಸಿಕ್ಕರೆ, ಅದನ್ನು ಒಪ್ಪಿತ ಆಧಾರದ ಮೇಲೆ ಖರೀದಿ ಮಾಡಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆಯೂ ನಾವು ತೀರ್ಮಾನ ಮಾಡಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಈ ಬಗ್ಗೆ ಭೂ ಮಾಲೀಕರು, ರೈತರು, ವ್ಯಾಪಾರಿಗಳು ಮುಂದೆ ಬಂದು ಜಮೀನು ನೀಡಬಹುದು ಇದಕ್ಕೆ ನಾವು ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ.
*ಪ್ರಶ್ನೋತ್ತರ*
ಬಿ ಯಿಂದ ಎ ಖಾತಾ ಪರಿವರ್ತನೆಗೆ ಎಷ್ಟು ಅರ್ಜಿ ಬಂದಿವೆ ಆಗಿದೆ ಎಂದು ಕೇಳಿದಾಗ, “ಸುಮಾರು 7 ಸಾವಿರ ಅರ್ಜಿಗಳು ಬಂದಿವೆ. ಎಲ್ಲರ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿ ಅವರ ಆಸ್ತಿ ಮುಂದೆ ಇರುವುದು ಸರ್ಕಾರಿ ರಸ್ತೆಯೇ ಎಂದು ಪರಿಶೀಲಿಸಿ. ಆ ಆಸ್ತಿಗೆ ಜಿಪಿಎಸ್ ನಿಗದಿಪಡಿಸುತ್ತಿರುವ ಕಾರಣ ಇದು ವಿಳಂಬವಾಗುತ್ತಿದೆ” ಎಂದು ತಿಳಿಸಿದರು.
*ಬೆಂಗಳೂರಿನಲ್ಲಿ ಗುತ್ತಿಗೆದಾರರ ಬಿಲ್ ಸಮಸ್ಯೆ ಇಲ್ಲ*
ಗುತ್ತಿಗೆದಾರರು ಬಾಕಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ, ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂದು ಕೇಳಿದಾಗ, “ಪಾಲಿಕೆಗಳಲ್ಲಿ ಕ್ರಾಂತಿಕಾರಿ ತೀರ್ಮಾನ ಮಾಡಿ ಬಿಲ್ ವಿತರಣೆ ಮಾಡುತ್ತಿದ್ದೇವೆ.ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆ ಸಮಸ್ಯೆ ಇಲ್ಲ. ಬೇರೆ ಕಡೆ ಕಾಮಗಾರಿಗಳ ಗುತ್ತಿಗೆದಾರರು ಈ ರೀತಿ ಕೇಳುತ್ತಿರಬಹುದು. ನಾವು ಸಮಸ್ಯೆ ಆದಷ್ಟು ಬಗೆಹರಿಸಿದ್ದೇವೆ. ಸುಮಾರು 90% ಸಮಸ್ಯೆ ಬಗೆಹರಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ 10% ಮಾತ್ರ ಬಾಕಿ ಉಳಿದಿವೆ. ಬೆಂಗಳೂರು ರಸ್ತೆ ಕಾಮಗಾರಿ ವಿಚಾರದಲ್ಲಿ ಯಾವ ಗುತ್ತಿಗೆದಾರರ ಬಿಲ್ ಬಾಕಿ ಇಲ್ಲ” ಎಂದರು.
ಪಾಲಿಕೆ ಚುನಾವಣೆ ಬಗ್ಗೆ ಕೇಳಿದಾಗ, “ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಗೆ ಬಿಟ್ಟಿದ್ದು, ಕೋರ್ಟ್ ನಲ್ಲಿ ಅವರೇ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಚುನಾವಣೆ, ಆಯೋಗದ ಕೈಯಲ್ಲಿದೆ, ನಮ್ಮ ಕೈಯಲ್ಲಿಲ್ಲ” ಎಂದು ತಿಳಿಸಿದರು.
*ಆಸ್ತಿ ತೆರಿಗೆ ಪಾವತಿ ಮಾಡದವರ ಆಸ್ತಿ ಹರಾಜು*
ಆಸ್ತಿ ತೆರಿಗೆ ಪಾವತಿ ಮಾಡದ ಕಾರಣ ಹರಾಜು ಮಾಡಲಾಗುತ್ತಿದೆ ಎಂದು ಕೇಳಿದಾಗ, “ಇದು ದೊಡ್ಡ ಸಮಸ್ಯೆಯಲ್ಲ. ಸಣ್ಣ ಪುಟ್ಟ ಮನೆಯವರು ಹೊರತಾಗಿ ಉಳಿದವರು ಅವರು ಪ್ರತಿ ತಿಂಗಳು ಬಾಡಿಗೆ ಪಡೆಯುತ್ತಿದ್ದಾರೆ. 80% ಜನ ವಾಣಿಜ್ಯ ಆಸ್ತಿಗಳು 7-8 ವರ್ಷಗಳಿಂದ ತೆರಿಗೆ ಪಾವತಿ ಮಾಡಿಲ್ಲ. ಕೆಲವು ಮಾಜಿ ಶಾಸಕರ ಆಸ್ತಿಗಳಿವೆ. ನಾನು ಅವರ ಹೆಸರು ಹೇಳುವುದಿಲ್ಲ. ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ, ನಾವು ಹೇಗೆ ನಡೆಬೇಕು. ಅವಕಾಶ ನೀಡಬೇಕು ಎಂದು ಓಟಿಎಸ್ ವ್ಯವಸ್ಥೆ ಕಲ್ಪಿಸಿದ್ದೆವು. ತೆರಿಗೆ ಸಂಗ್ರಹ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ಮಾನವೀಯತೆ ಇರುವುದಕ್ಕೆ ಓಟಿಎಸ್ ನೀಡಿದ್ದೆವು. ಇದರಿಂದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂದು ನಮಗೆ ಗೊತ್ತಿದೆ. ಇದನ್ನು ಬಳಸಿಕೊಳ್ಳದಿದ್ದರ, ಪಾಲಿಕೆ ಅವರು ಏನು ಮಾಡಬೇಕು. ಕೆಲವರು ಕಟ್ಟಡ ನಕ್ಷೆ ಅನುಮೋದನೆಗೆ 35% ಪಾವತಿ ಮಾಡಿ 75% ಪಾವತಿ ಮಾಡದೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಹವರಿಗೆ ನಕ್ಷೆ ಅನುಮೋದನೆ ಮಾಡಬೇಡಿ ಎಂದಿದ್ದೇನೆ. ಈ ರೀತಿ ಅನೇಕ ಡೆವಲಪ್ಪರ್ ಗಳು ದುರುಪಯೋಗ ಮಾಡಿಕೊಂಡಿದ್ದಾರೆ. ಇಲ್ಲಿ ಬಡವರು, 30×40 ನಿವೇಶನದಾರರು ಇಲ್ಲ. ಎಲ್ಲಾ ದೊಡ್ಡ ಶ್ರೀಮಂತರೆ ಇದ್ದಾರೆ” ಎಂದು ತಿಳಿಸಿದರು.
“ಓಟಿಎಸ್ ಯೋಜನೆಯಲ್ಲಿ 2.65 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ 1200 ಕೋಟಿ ಸಂಗ್ರಹವಾಗಿದೆ. ಇದು ಐತಿಹಾಸಿಕ ನಿರ್ಧಾರ” ಎಂದು ಹೇಳಿದರು.
ಮಂತ್ರಿ ಮಾಲ್ ನವರು 35 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅವರಿಗೆ ಈ ರೀತಿ ಮಾಡುತ್ತಿಲ್ಲ ಬೇರೆಯವರಿಗೆ ಯಾಕೆ ಎಂದು ಕೇಳಿದಾಗ, “ನಾನು ಅಲ್ಲಿಗೆ ಬೀಗ ಹಾಕಿಸಿ, 8 ಕೋಟಿ ಹಣ ಪಾವತಿ ಮಾಡಿದ್ದಾರೆ. ಅವರಿಗೆ ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಿದೆ. 20 ಕೋಟಿ ಬಾಕಿ ಇದೆ” ಎಂದು ಹೇಳಿದರು.
ಶಿರಹಟ್ಟಿ ಬಿಜೆಪಿ ಶಾಸಕರ ಬಂಧನವಾಗಿರುವ ಬಗ್ಗೆ ಕೇಳಿದಾಗ, “ನನಗೆ ಅದರ ಮಾಹಿತಿ ಇಲ್ಲ” ಎಂದರು.
ಪಾಲಿಕೆ ಬಳಿ ಹಣ ಇಲ್ಲ ಎಂದು ಕೇಳಿದಾಗ, “ಬೆಂಗಳೂರು ಪೂರ್ವ ಪಾಲಿಕೆ ಸ್ವಲ್ಪ ಬಡವಾಗಿರಬಹುದು. ಉಳಿದ ಎಲ್ಲಾ ಪಾಲಿಕೆಗಳು ತಮ್ಮ ಸಾಮರ್ಥ್ಯದ ಮೇಲೆ ನಿರ್ವಹಣೆ ಮಾಡಬಹುದು” ಎಂದು ಹೇಳಿದರು.
ಜಿಬಿಎ ಸಭೆ ಬಗ್ಗೆ ಕೇಳಿದಾಗ, “ನಾವು ಅದನ್ನು ಮಾಡುತ್ತೇವೆ” ಎಂದು ತಿಳಿಸಿದರು.
ಬೆಂಗಳೂರಿಗೆ ರಾಜ್ಯ ಬಜೆಟ್ ನಲ್ಲಿ ಏನು ನಿರೀಕ್ಷೆ ಮಾಡಬಹುದು ಎಂದು ಕೇಳಿದಾಗ, “ಈ ಬಗ್ಗೆ ನಮ್ಮ ಅಧಿಕಾರಿಗಳು ಪ್ರಸ್ತಾವನೆ ನೀಡಿದ್ದಾರೆ. ಉಳಿದ ವಿಚಾರವನ್ನು ಸಿಎಂ ಅವರ ಬಳಿ ಕೇಳಿ. ಸರ್ಕಾರದ ಬಳಿ ಇರುವ ಹಣದ ಮೇಲೆ ಅವರು ತೀರ್ಮಾನ ಮಾಡುತ್ತಾರೆ” ಎಂದರು.
26ರಂದು ನೀವು ದೆಹಲಿಗೆ ಹೋಗುತ್ತೀರಿ ಎಂದು ಶಾಸಕರ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಕೇಳಿದಾಗ, “ಇಕ್ಬಾಲ್ ಹುಸೇನ್ ಬಾಯಿಗೆ ಬೀಗ ಹಾಕಿಕೊಂಡರೆ ಒಳ್ಳೆಯದು. ನಾನು ಎಲ್ಲಾ ಇಕ್ಬಾಲ್ ಹುಸೇನ್ ಅವರಿಗೂ ಹೇಳುತ್ತಿದ್ದೇನೆ. ನನಗೆ ಒಳ್ಳೆಯದು ಮಾಡಬೇಕು ಎಂದು ಅಂದುಕೊಂಡಿದ್ದರೆ ಬಾಯಿಗೆ ಬೀಗ ಹಾಕಿಕೊಳ್ಳಲಿ” ಎಂದರು.
ಸಿಎಂ ಅವರು ಟ್ವೀಟ್ ಬಗ್ಗೆ ಕೇಳಿದಾಗ, “ಬಿಜೆಪಿಯವರು ಅಥವಾ ಏನಾದರೂ ಮಾಡುತ್ತಿರಬಹುದು. ನನಗೆ ಮಾಹಿತಿ ಇಲ್ಲ. ಅವರಿಗೆ ಮಾಹಿತಿ ಇರುತ್ತದೆ. ನಾಳೆ ಕಾರವಾರಕ್ಕೆ ನಾವು ಹೋಗುತ್ತಿದ್ದು, ಅಲ್ಲಿ ಅವರ ಜೊತೆ ಮಾತನಾಡಿ ನಿಮಗೆ ಹೇಳುತ್ತೇನೆ” ಎಂದರು.


