Homeಕರ್ನಾಟಕರಘುಪತಿ ಭಟ್‌ಗೆ ನೋಟಿಸ್ ಜಾರಿ; ಚುನಾವಣೆ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತುಕ್ರಮ: ಸುನಿಲ್ ಕುಮಾರ್

ರಘುಪತಿ ಭಟ್‌ಗೆ ನೋಟಿಸ್ ಜಾರಿ; ಚುನಾವಣೆ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತುಕ್ರಮ: ಸುನಿಲ್ ಕುಮಾರ್

ವಿಧಾನ ಪರಿಷತ್ ಚುನಾವಣಾ ಕಣದಿಂದ ರಘುಪತಿ ಭಟ್ ಅವರು 24 ಗಂಟೆಯೊಳಗೆ ಹಿಂದೆ ಸರಿಯದಿದ್ದರೆ ಪಕ್ಷದಿಂದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಘುಪತಿ ಭಟ್ ಆಗಲಿ ಯಾರೇ ಆಗಲಿ, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೇ ಮಾಡಿದರೂ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ. ಅವರಿಗೆ ಇನ್ನೂ ಕಾಲಾವಕಾಶ ಇದೆ, ಕಣದಿಂದ ಕೂಡಲೇ ಹಿಂದೆ ಸರಿಯಲಿ” ಎಂದು ಆಗ್ರಹಿಸಿದರು.

“ರಘುಪತಿ ಭಟ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಏನು ಬೇಕೋ ಅದನ್ನೆಲ್ಲ ನಾವು ಪಕ್ಷದ ವತಿಯಿಂದ ಮಾಡುತ್ತೇವೆ” ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮದ ವಿಚಾರವಾಗಿ ಮಾತನಾಡಿ, “ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದ ಬಂಧನದ ಹುನ್ನಾರ ನಡೆಸಿದೆ. ಜನರಿಗೆ ರಕ್ಷಣೆ ಕೊಡುವುದು ಪೊಲೀಸರ ಜವಾಬ್ದಾರಿ. ಪೊಲೀಸರೇ ಗೂಂಡಾ ರೀತಿ ವರ್ತನೆ ಮಾಡಿದರೆ ಅದು ವ್ಯವಸ್ಥೆಗೆ ಮಾರಕ. ಬೆಳ್ತಂಗಡಿಯಲ್ಲಿ ಕಾನೂನು ಉಲ್ಲಂಘಿಸುವ ಯಾವುದೇ ಘಟನೆ ನಡೆದಿಲ್ಲ” ಎಂದರು.

“ಶಾಂತಿಯನ್ನು ಕದಡುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ. ಈ ಬಗ್ಗೆ ಗೃಹ ಸಚಿವರಿಂದ ಸ್ಪಷ್ಟನೆ ಕೇಳುತ್ತೇವೆ. ಅಧಿವೇಶನದಲ್ಲಿ ನಿಶ್ಚಿತವಾಗಿ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಒಬ್ಬ ಶಾಸಕನನ್ನು ಬೆದರಿಸುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಮಟ್ಟ ಹಾಕುವ ಹುನ್ನಾರ ಇದು” ಎಂದು ಆರೋಪಿಸಿದರು.

ಪ್ರಜ್ವಲ್ ಪಾಸ್‍ಪೋರ್ಟ್ ಸೀಸ್ ಮಾಡಲು ಕೇಂದ್ರ ಸರ್ಕಾರ ನಿರಾಸಕ್ತಿ ಎಂದು ಗೃಹ ಸಚಿವರು ಆರೋಪಿಸಿದ್ದಾರಲ್ಲ ಎಂದು ಪ್ರಶ್ನಿಸಿದಾಗ, “ಇಷ್ಟೆಲ್ಲಾ ಘಟನೆಗಳಾಗುವಾಗ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಏನೂ ಮಾಡಿಲ್ಲ. ವಿದೇಶಕ್ಕೆ ಪರಾರಿಯಾಗುವಾಗ ಕೈಕಟ್ಟಿ ಕುಳಿತಿದ್ದು ಯಾಕೆ” ಎಂದು ಪ್ರಶ್ನಿಸಿದರು.

ನೋಟಿಸ್ ಜಾರಿ

ಜೂನ್‌ 03ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀರಿ. ಇದು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆ. ಆದುದರಿಂದ ಈ ಪತ್ರ ತಲುಪಿದ ಎರಡು ದಿನದ ಒಳಗಾಗಿ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಟೀಕರಣ ನೀಡಬೇಕು ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ರಘುಪತಿ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments