ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ಕೋವಿಡ್ ಹಗರಣ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು. ತಮ್ಮ ಬಳಿ ಇರುವ ಮಾಹಿತಿ ಹಾಗೂ ದಾಖಲೆಗಳನ್ನ ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೋವಿಡ್ ಅಕ್ರಮಗಳ ಕುರಿತು ಯತ್ನಾಳ್ ಅವರು ಹೇಳಿಕೆ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, “ಯತ್ನಾಳ್ ಅವರು ಹೇಳುತ್ತಿರುವುದರಲ್ಲಿ ಸತ್ಯ ಇದೆ. ಬಿಜೆಪಿ ಪಕ್ಷದ ಶಾಸಕರಾಗಿ ಆ ಪಕ್ಷದ ನಾಯಕರ ಮೇಲೆ ಯತ್ನಾಳ್ ಅವರು 40 ಸಾವಿರ ಕೋಟಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಯಾರು ಕೂಡ ಬಸನಗೌಡ ಯತ್ನಾಳ್ ಅವರಿಗೆ ಒಂದು ನೋಟಿಸ್ ಕೂಡ ನೀಡುವುದಿಲ್ಲ. ಶಿಸ್ತು ಕ್ರಮ ಜರುಗಿಸುವ ಬಗ್ಗೆ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರಿಗು ಧೈರ್ಯ ಇಲ್ಲ” ಎಂದರು.
“ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗ ಸ್ವಯಂ ಪ್ರೇರಿತವಾಗಿ ಯತ್ನಾಳ್ ಅವರಿಂದ ಮಾಹಿತಿ ಪಡೆಯಬಹುದು. ಅಥವಾ ಯತ್ನಾಳ್ ಅವರು ತಮ್ಮ ಬಳಿ ಇರುವ ಮಾಹಿತಿಗಳನ್ನ ಸರ್ಕಾರಕ್ಕೆ ಸಲ್ಲಿಸಿದರೆ ಅದನ್ನ ತನಿಖಾ ಆಯೋಗಕ್ಕೆ ಸರ್ಕಾರವೇ ಸಲ್ಲಿಸಲಿದೆ. 40 ಸಾವಿರ ಕೋಟಿ ಭ್ರಷ್ಟಾಚಾರದ ಬಗ್ಗೆ ಮಾತಾಡಿರುವ ಯತ್ನಾಳ್ ಅವರಿಗೆ ಸರ್ಕಾರದಿಂದ ಕೂಡ ಯತ್ನಾಳ್ ಅವರಿಗೆ ನೋಟಿಸ್ ನೀಡಿ ಮಾಹಿತಿ ಒದಗಿಸುವಂತೆ ಕೇಳಲಾಗುವುದು” ಎಂದು ತಿಳಿಸಿದರು.
“ವಿಜಯೇಂದ್ರ ಅವರ ಭ್ರಷ್ಟಾಚಾರದ ಕೆಲವು ದಾಖಲೆಗಳು ಯತ್ನಾಳ್ ಅವರ ಬಳಿ ಇರಬಹುದು. ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹಿಂಜರಿಯುತ್ತಿದ್ದಾರೆ. ಯತ್ನಾಳ್ ಅವರ ರೀತಿಯಲ್ಲಿ ಬೇರೆ ಯಾವುದೇ ಪಕ್ಷದಲ್ಲಿ ಹೇಳಿಕೆಗಳನ್ನ ನೀಡಿದ್ದರೆ, ನೋಟಿಸ್ ನೀಡಿ ಶಿಸ್ತು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಬಿಜೆಪಿ ನಾಯಕರಿಗೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಎಲ್ಲವನ್ನ ನೋಡಿಕೊಳ್ಳುತ್ತಿದ್ದಿದ್ದು ವಿಜಯೇಂದ್ರ. ವಿಜಯೇಂದ್ರ ಅವರ ಕೆಲವು ದಾಖಲೆಗಳು ಯತ್ನಾಳ್ ಬಳಿ ಇರೋದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳೋಕೆ ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಝೀರೋ ಟಾಲರೆನ್ಸ್ ಎನ್ನುವ ಮೋದಿ ಅವರು ಸುಮ್ಮನಿರೋದು ಏಕೆ?
“ಭ್ರಷ್ಟಾಚಾರ ವಿಚಾರದಲ್ಲಿ ಸಹಿಸಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಪಕ್ಷದ ಶಾಸಕ 40 ಸಾವಿರ ಕೋಟಿ ಅಕ್ರಮದ ಆರೋಪ ಮಾಡಿದರೂ ಮೌನವಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಪಾಲು ಕೇಂದ್ರಕ್ಕೂ ತಲುಪಿದೆಯಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತೆ. ಭ್ರಷ್ಟಾಚಾರದ ಪಾಲು ಕೇಂದ್ರಕ್ಕೆ ಮುಟ್ಟಿರುವ ಹಿನ್ನೆಲೆಯಲ್ಲೇ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ಮಾತುಗಳಿವೆ” ಎಂದು ಆರೋಪಿಸಿದರು.
“ಮೊದಲ ಬಾರಿ ಶಾಸಕರಾದವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದೆ. ಆದರೆ ರಾಜ್ಯಾಧ್ಯಕ್ಷರ ಮೇಲೆ ಅವರ ಪಕ್ಷದ ಶಾಸಕ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರ ಪಾರ್ಟಿ ಆಗಿದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
“ಇ.ಡಿ, ಐಟಿ, ಸಿಬಿಐ ತನಿಖಾ ಸಂಸ್ಥೆಗಳು ಇಂಥಹ ವಿಚಾರಗಳು ಬಂದಾಗ ಯಾವುದೇ ತನಿಖೆಗಳನ್ನ ಕೈಗೊಳ್ಳಲ್ಲ. ಇದೇ ಕಾಂಗ್ರೆಸ್ ನಾಯಕರ ಮೇಲೆ ಆರೋಪಗಳು ಬಂದಿದ್ದರೆ ಇಷ್ಟರೊಳಗೆ ಐಟಿ ದಾಳಿಗಳು ನಡೆದಿರುತ್ತಿದ್ವು. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡ್ತಿವೆ” ಎಂದು ಆರೋಪಿಸಿದರು.