ಜನರು ದಡ್ಡರಲ್ಲ, ತಮ್ಮ ಬದುಕು ಯಾರು ಕಟ್ಟಿಕೊಡುತ್ತಾರೋ ಅವರಿಗೆ ಬೆಂಬಲ ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದು, ಒಕ್ಕಲಿಗರೂ ಸೇರಿದಂತೆ ಎಲ್ಲ ವರ್ಗದ ಜನ ಕಾಂಗ್ರೆಸ್ಗೆ ಬೆಂಬಲ ನೀಡಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡುವಾಗ, ವಿಧಾನಸಭೆ ಚುನಾವಣೆ ವೇಳೆ ಶೇ.5ರಷ್ಟು ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲಿದ್ದವು. ಈ ಬಾರಿ ಒಕ್ಕಲಿಗರು ಯಾರನ್ನು ಬೆಂಬಲಿಸಲಿದ್ದಾರೆ ಎಂದು ಕೇಳಿದಾಗ ಅವರು ಹೀಗೆ ಉತ್ತರಿಸಿದರು.
“ಒಕ್ಕಲಿಗರಾಗಲಿ, ಬೇರೆ ಸಮುದಾಯದವರಾಗಲಿ ಯಾರೂ ದಡ್ಡರಲ್ಲ. ತಮಗೆ ಯಾರು ಅನುಕೂಲ ಮಾಡಿಕೊಡಲಿದ್ದಾರೆ ಹಾಗೂ ದೇಶಕ್ಕೆ ಯಾರು ಸೂಕ್ತ ಎಂದು ನೋಡುತ್ತಾರೆ. ತಮಗೆ, ರಾಜ್ಯಕ್ಕೆ, ದೇಶಕ್ಕೆ ಯಾರು ಉತ್ತಮರು ಎಂದು ಜನ ಆಲೋಚನೆ ಮಾಡುತ್ತಾರೆ. ಜನ ಅವರ ಬದುಕು ನೋಡುತ್ತಾರೆ ಹೊರತು, ಭಾವನೆ ನೋಡುವುದಿಲ್ಲ” ಎಂದರು.
ಜೆಡಿಎಸ್ಗೆ ಮುಕ್ತಿ
ಸ್ವಾಮೀಜಿಗಳು ಕೃಷ್ಣನಂತೆ ಅವರು ಪಾಂಡವರಂತೆ ಇರುವ ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಜೆಡಿಎಸ್ ಎಲ್ಲಿದೆ? ಜೆಡಿಎಸ್ ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್ ನವರು ಮಾಡಿದ್ದಾರೆ” ಎಂದು ಲೇವಡಿ ಮಾಡಿದರು.
ಸರ್ಕಾರವನ್ನು ಒಂದು ಜಾತಿಗೆ ಸೀಮಿತವಾಗಿಸುತ್ತಿರುವುದೇಕೆ ಎಂದು ಕೇಳಿದಾಗ, “ನೀವು ನಾವು ಬೇಡ ಎಂದರೂ ಜಾತಿ ನಮ್ಮನ್ನು ಬಿಡುವುದಿಲ್ಲ. ನಾವು ಅರ್ಜಿ ಹಾಕಿ ಹುಟ್ಟದಿದ್ದರೂ ನಾವು ಸಾಯುವಾಗ ಧರ್ಮ, ಜಾತಿ ಬಂದೇ ಬರುತ್ತದೆ. ಧರ್ಮ ಬೇಡ ಎಂದರೂ ನಾಮಕರಣ ಹಾಗೂ ವಿವಿಧ ಕಾರ್ಯಗಳಲ್ಲಿ ಧರ್ಮ ಅಡಗಿದೆ” ಎಂದರು.
ಮೋದಿಗೆ ತಮ್ಮ ಮೇಲೆ ವಿಶ್ವಾಸವಿಲ್ಲ
“ಮೋದಿ ಅವರು ತಮ್ಮ ಹೆಸರೇಳಿ ಮತ ಕೇಳಲಿಲ್ಲ. ಶಿವಮೊಗ್ಗಕ್ಕೆ ಬಂದಿದ್ದ ಅವರು ಅಭ್ಯರ್ಥಿ ರಾಘವೇಂದ್ರ ಅವರಿಗೆ ಮತ ಕೊಡಿ ಎಂದು ಕೇಳಿದರೇ ಹೊರತು ತಮಗೆ ಕೊಡಿ ಎಂದು ಕೇಳಲೇ ಇಲ್ಲ. ಮೋದಿ ಅವರಿಗೆ ತಮ್ಮ ಮೇಲೆ ವಿಶ್ವಾಸವಿಲ್ಲ. ನಿಮಗೇನಾದರೂ ಅವರ ಪರವಾದ ಅಲೆ ಕಾಣುತ್ತಿದೆಯೇ” ಎಂದು ಪ್ರಶ್ನಿಸಿದರು.
ಸೋಮಶೇಖರ್, ಹೆಬ್ಬಾರ್ ಬಿಜೆಪಿ ಶಾಸಕರು
ಕಾಂಗ್ರೆಸಿಗರು ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡಿದ್ದಾರೆ ಎಂದು ಕೇಳಿದಾಗ, “ನಾನು ಅವರನ್ನು ಎಲ್ಲಿ ಸೇರಿಸಿಕೊಂಡಿದ್ದೇನೆ. ಅವರು ತಮ್ಮ ಕ್ಷೇತ್ರದ ವಿಚಾರವಾಗಿ ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಆ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕೇಳಿ. ಸೋಮಶೇಖರ್ ಹಾಗೂ ಹೆಬ್ಬಾರ್ ಅವರು ಬಿಜೆಪಿಯ ಅಧಿಕೃತ ಶಾಸಕರು. ಅವರು ತಮ್ಮದೇ ಆದ ಲೆಕ್ಕಾಚಾರ, ನಂಬಿಕೆ ಮೇಲೆ ಯಾವ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.