ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾರ್ಗೆಟ್ ಅಲ್ಲ, ನಾನು ಟಾರ್ಗೆಟ್ ಆಗಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, “ಉಪ ಚುನಾಣೆಯಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ದೊಡ್ಡ ಕುತಂತ್ರ ರೂಪಿಸಿದೆ. ಅದರಿಂದ ನನ್ನ ಮುಂದಿನ ಬೆಳವಣಿಗೆ ಕುಗ್ಗಿಸಬಹುದು ಎಂದು ಅವರು ಲೆಕ್ಕಾಚಾರ ಮಾಡಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕೆಂದು ಹೊರಟಿದ್ದಾರೆ. ನಾನು ಕೇಂದ್ರ ಮಂತ್ರಿಯಾಗಿರುವುದನ್ನು ಅವರು ಸಹಿಸುತ್ತಿಲ್ಲ” ಎಂದರು.
“ಕಳೆದ ವಿಧಾನಸಭೆ ಚುನಾವಣೆ ಕಾಲದಿಂದಲೇ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಷಡ್ಯಂತ್ರ ಮಾಡಿ 19 ಸ್ಥಾನಕ್ಕೆ ಜೆಡಿಎಸ್ ಇಳಿಸಿದರು. ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ, ಯಾರೊಬ್ಬರನ್ನೂ ಅಲುಗಾಡಿಸಲು ಅವರಿಂದ ಆಗಲಿಲ್ಲ” ಎಂದು ಕಿಡಿಕಾರಿದರು.
ಮುಸ್ಲಿಮರು ಕಾಂಗ್ರೆಸ್ ಪಕ್ಷದ ಟಾರ್ಗೆಟ್
“ಮುಸ್ಲಿಂ ಮತಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಾರ್ಗೆಟ್ ಮಾಡಿವೆ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಯಾವಾಗಲೂ ಟಾರ್ಗೆಟ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾರನ್ನಾದರೂ ಟಾರ್ಗೆಟ್ ಮಾಡಿಕೊಳ್ಳಲಿ. ನಾವು ಮಾತ್ರ ನಮ್ಮ ಕೆಲಸಗಳ ಆಧಾರದ ಮೇಲೆ ಮತ ಕೊಡಿ ಎಂದು ಕೇಳುತ್ತೇವೆ” ಎಂದು ಕುಮಾರಸ್ವಾಮಿ ಹೇಳಿದರು.
“ಕಾಂಗ್ರೆಸ್ ಯಾವ ಮಟ್ಟಿಗೆ ಮುಸ್ಲಿಮರನ್ನು ಟಾರ್ಗೆಟ್ ಮಾಡಿದೆ ಎನ್ನುವುದಕ್ಕೆ ಶಿಗ್ಗಾಂವಿ ಕಾಂಗ್ರೆಸ್ ಮುಖಂಡ ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು ಕಿಡ್ನಾಪ್ ಮಾಡಿ, ಅವರನ್ನು ಕಳೆದ ಒಂದು ವಾರದಿಂದ ಕೂಡಿ ಹಾಕಿಕೊಂಡಿದ್ದಾರೆ. ಖಾದ್ರಿ ಅವರಿಂದ ನಾಮಪತ್ರ ವಾಪಸ್ ತೆಗೆಸಲು ಹೊರಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಾಮಪತ್ರ ವಾಪಸ್ ತೆಗೆಸುತ್ತಿದ್ದಾರೆ. ಒಂದು ವಾರದಿಂದ ಈ ರೀತಿಯ ರಾಜಕೀಯ ನಡೆಯುತ್ತಿದೆ. ಖಾದ್ರಿಯವರನ್ನು ಒಂದು ವಾರ ಕೂಡಿ ಹಾಕಿಕೊಳ್ಳುವ ಅವಶ್ಯಕತೆ ಏನಿತ್ತು” ಎಂದು ಪ್ರಶ್ನಿಸಿದರು.
“ರಾಮನಗರ ಸೇರಿದಂತೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ” ಎಂದು ಆರೋಪಿಸಿದರು.