Homeಕರ್ನಾಟಕರಾಜ್ಯದ ಜನತೆ ನನ್ನ ಜೊತೆ ಇರುವವರೆಗೂ BJP-JDS ಷಡ್ಯಂತ್ರಕ್ಕೆ ಹೆದರಲ್ಲ: ಸಿದ್ದರಾಮಯ್ಯ

ರಾಜ್ಯದ ಜನತೆ ನನ್ನ ಜೊತೆ ಇರುವವರೆಗೂ BJP-JDS ಷಡ್ಯಂತ್ರಕ್ಕೆ ಹೆದರಲ್ಲ: ಸಿದ್ದರಾಮಯ್ಯ

ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಎಸ್‌ ಷಡ್ಯಂತ್ರಕ್ಕೆ ಹದರಲ್ಲ. ಎಲ್ಲ ಷಡ್ಯಂತ್ರ ಸೋಲಿಸುತ್ತೇನೆ. ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 501.81 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿದರು.

“ವರುಣಾ ಜನರ ಆಶೀರ್ವಾದದಿಂದ ಎರಡು ಬಾರಿ ಸಿಎಂ‌ ಆಗಿದ್ದೇನೆ. ವರುಣಾ ಕಾಂಗ್ರೆಸ್ಸಿನ ಭದ್ರಕೋಟೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗಿಂತ ಹೆಚ್ಚು ಮತ ಕೊಟ್ಟಿದ್ದೀರಿ. ನನಗೆ ವಿಶೇಷವಾಗಿ ಆಶೀರ್ವಾದ ಮಾಡಿದ್ದಕ್ಕಾಗಿ ನಾನು ಕ್ಷೇತ್ರದ ಮತದಾರರಿಗೆ ಅನಂತ ಧನ್ಯವಾದ ಅರ್ಪಿಸುವೆ. ವರುಣಾ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಕೊಡಲಾಗುತ್ತಿದೆ. ನಾನು ಉಪಕಾರ ಮಾಡುತ್ತಿಲ್ಲ. ಕ್ಷೇತ್ರದ ಪ್ರತಿನಿಧಿಯಾಗಿ ಅಭಿವೃದ್ಧಿ ಮಾಡುವ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ” ಎಂದರು.

“ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಎಲ್ಲ ಜಾತಿ, ಎಲ್ಲ ಧರ್ಮದ ಬಡವರ, ಮಧ್ಯಮ ವರ್ಗದವರ ಬದುಕಿಗೆ ಆಸರೆ ಆಗುವ ಐದು ಗ್ಯಾರಂಟಿ ಯೋಜನೆಗಳನ್ನು ಜನಪರವಾಗಿ ರೂಪಿಸಿ ಜಾರಿ ಮಾಡಿದ್ದೇವೆ. ಪ್ರತೀ ವರ್ಷ ಈ ಗ್ಯಾರಂಟಿಗಳ ಮೂಲಕ 56 ಸಾವಿರ ಕೋಟಿ ರೂಪಾಯಿಗಳನ್ನು ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗೆ ದೇಶದಲ್ಲಿ ನುಡಿದಂತೆ ನಡೆದುಕೊಂಡಿರುವ ಪಕ್ಷ ನಿಮ್ಮದೇ ಕಾಂಗ್ರೆಸ್ ಪಕ್ಷ” ಎಂದು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ನಿರಂತರ ದ್ರೋಹ

“ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಪಾಲಿನ ತೆರಿಗೆ ಪಡೆಯಲು ಭಿಕ್ಷೆ ಬೇಡಬೇಕಾ? ಮೊನ್ನೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅತಿ ಹೆಚ್ಚು ತೆರಿಗೆ ಪಾಲು ಕೊಟ್ಟಿರುವ ಕೇಂದ್ರಕ್ಕೆ ರಾಜ್ಯಕ್ಕೆ ಮಾತ್ರ ಕೇವಲ ಆರು ಸಾವಿರ ಕೋಟಿ ಕೊಟ್ಟು ಭಯಾನಕ ಅನ್ಯಾಯ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಲೋಕಸಭಾ ಯೋಜನೆ ಬಳಿಕ ನಮ್ಮ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ದೆಹಲಿಯ ಮೋದಿಯಿಂದ, ಇಲ್ಲಿನ ಆರ್.ಅಶೋಕ್ ವರೆಗೂ ಸುಳ್ಳುಗಳ ಮೇಲೆ ಸುಳ್ಳು ಹೇಳಿದರು. ಇದುವರೆಗೂ ಗ್ಯಾರಂಟಿಗಳು ನಿಂತಿಲ್ಲ. ನಿಲ್ಲುವುದೂ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ನಿಲ್ಲಲ್ಲ” ಎಂದು ಘೋಷಿಸಿದರು.‌

ಸಿದ್ದರಾಮಯ್ಯ ಒಂದೇ ಒಂದು ರೂಪಾಯಿ ಲಂಚ ಪಡೆದ ಉದಾಹರಣೆ ಇದೆಯಾ?

“ನಾನು ಮಂತ್ರಿಯಾಗಿ 45 ವರ್ಷ ಆಯ್ತು. ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ಹಿಂದುಳಿದ ವರ್ಗದ ನಾನು ಎರಡು ಬಾರಿ ಸಿಎಂ ಆದೆ ಅಂತ ಬಿಜೆಪಿಗೆ ಹೊಟ್ಟೆಕಿಚ್ಚು. ಇದನ್ನು ನೀವು ಸಹಿಸ್ತೀರಾ” ಎಂದು ಪ್ರಶ್ನಿಸಿದರು.

“ನಾನು ಎರಡು ಬಾರಿ ಸಿಎಂ ಆಗಿ ಮೈಸೂರಲ್ಲಿ ಒಂದೂ ಮನೆ ಇಲ್ಲ. ಮರಿಸ್ವಾಮಿ ಮನೇಲಿ ಇದೀನಿ. ಕುವೆಂಪು ರಸ್ತೆಯಲ್ಲಿ 3 ವರ್ಷದಿಂದ ಮನೆ ಕಟ್ಟುತ್ತಲೇ ಇದ್ದೀನಿ. ಇದುವರೆಗೂ ಪೂರ್ತಿ ಆಗಿಲ್ಲ. ನನಗೆ ವರ್ಚಸ್ಸು ಕೊಡುವವರು ನೀವು. ನಿಮ್ಮ ಎದುರಿಗೆ ಪ್ರಾಮಾಣಿಕವಾಗಿ ಇದ್ದೇನೆ. ನೀವೇ ನನ್ನ ಮಾಲೀಕರು. ನೀವೇ ನನ್ನ ಯಜಮಾನರು. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ” ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಚಿವರುಗಳಾದ ಕೆ.ವೆಂಕಟೇಶ್, ರಹೀಂಖಾನ್, ಬೋಸ್ ರಾಜ್, ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ವಿಧಾನಸಭೆ ಮತ್ತು ವಿಧಾನ‌ ಪರಿಷತ್ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ದರ್ಶನ್ ದ್ರುವನಾರಾಯಣ್, ತಿಮ್ಮಯ್ಯ, ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments