ಬೆಳಗಾವಿ ಜಿಲ್ಲೆಯವರು ಯಾರೆ ಮುಖ್ಯಮಂತ್ರಿಯಾದರೂ ಅದಕ್ಕೆ ನನ್ನ ಬೆಂಬಲ ಇದೆ. ಅದರಲ್ಲೂ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಆಗುತ್ತಾರೆ ಎಂದಾದರೆ ನನ್ನ ಬೆಂಬಲ ಸಂಪೂರ್ಣ ಇದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ನಮ್ಮ ಜಿಲ್ಲೆಯವರು ಯಾಎ ಸಿಎಂ ಆಗಲಿ ಅದಕ್ಕೆ ಬೆಂಬಲ ಕೊಡುತ್ತೇವೆ” ಎಂದು ಹೇಳುವ ಮೂಲಕ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಬೆಂಬಲ ಸೂಚಿಸಿದರು.
“ಎಲ್ಲರಿಗೂ ಅಧಿಕಾರ ಬೇಕಾಗಿದೆ. ಸನ್ಯಾಸಿ ಇದ್ದವರು ಯಾರೂ ರಾಜಕಾರಣಕ್ಕೆ ಬರುತ್ತಿರಲಿಲ್ಲ, ಆದರೆ ಸದ್ಯ ಸನ್ಯಾಸಿಗಳು ರಾಜಕಾರಣಕ್ಕೆ ಬರುತ್ತಿದ್ದಾರೆ. ಮತ್ರಿಯಾಗಬೇಕು ಎನ್ನುವ ಆಸೆ ಇಲ್ಲ. ಈಗಾಗಲೇ ನಾನು ಹಲವಾರು ಜವಾಬ್ದಾರಿ ಇಲಾಖೆ ನಿಭಾಯಿಸಿದ್ದೇನೆ. ರಾಜ್ಯದ ಡಿಸಿಎಂ ಆಗಿದ್ದೇನೆ, ನನಗೆನೂ ಹೊಸದಾಗಿ ಮಂತ್ರಿ ಆಗಬೇಕು ಅನ್ನುವ ಆಸೆ ಇಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಇವೆ” ಎಂದರು.
“ನನಗೆ ಯಾವುದೇ ಅನುದಾನದ ಕೊರತೆ ಇಲ್ಲ, ಒಂದೂವರೆ ವರ್ಷದಲ್ಲಿ 2 ಸಾವಿರ ಕೋಟಿ ಅಷ್ಟು ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅಗತ್ಯ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ” ಎಂದು ಲಕ್ಷ್ಮಣ್ ಸವದಿ ಹೇಳಿದರು.
ಮುಡಾ ಪ್ರಕರಣ ಕುರಿತು ಮಾತನಾಡಿ, “ಮುಡಾ ಪ್ರಕರಣ 20 ವರ್ಷಗಳ ಹಿಂದೆ ಆಗಿರುವಂತದ್ದು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾವುದೇ ಆದೇಶ ಮಾಡಿಲ್ಲ, ತಮ್ಮ ಪತ್ನಿಗೆ ನಿವೇಶನ ಬೇಕಂತ ಎಲ್ಲಿಯೂ ಅರ್ಜಿ ಸಲಿಸಿಲ್ಲ. ಸಿಎಂ ಸಿದರಾಮಯ್ಯ ಅವರ ಪತ್ನಿಗೆ ಅವರ ಸಹೋದರ ಅರಶಿನ ಕುಂಕುಮ ವ್ಯವಸ್ಥೆಯಲ್ಲಿ ದಾನದ ರೂಪದಲ್ಲಿ ನೀಡಿದ್ದಾರೆ” ಎಂದರು.