ವಕ್ಫ್ ವಿವಾದ ಬಿಜೆಪಿಯ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದರು.
“ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈ ವಿವಾದ ಸೃಷ್ಟಿಸಿದೆ. ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019ರಿಂದ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ನಾವು ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಜೆಪಿಸಿ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ” ಎಂದು ತಿಳಿಸಿದರು.
ಶಿವಕುಮಾರ್ ಮುಂದೆ ಯಾಕೆ ತಗ್ಗಿಬಗ್ಗಿ ನಡೆಯಬೇಕು ಎಂಬ ಆರ್.ಅಶೋಕ್ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ನಾನು ಅವರ ವಿಚಾರ ಮಾತನಾಡಿಲ್ಲ. ನಾನು ಜಯನಗರ ಕ್ಷೇತ್ರದ ಅನುದಾನ ವಿಚಾರವಾಗಿ ಸಂಸದ ಸೂರ್ಯ ಅವರ ಜತೆ ಚರ್ಚೆ ಮಾಡಿದ್ದೇನೆ. ಅಲ್ಲಿನ ಶಾಸಕರು ನಾನು ಸಚಿವನಾದ ನಂತರ ಬೆಂಗಳೂರು ಅಧೋಗತಿಯಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರು ಎಲ್ಲಿ ಅಧೋಗತಿಯಾಗಿದೆ? ಇದೇ ಅಶೋಕ್ ಅವರು ಸಂವಿಧಾನಿಕ ಸಂಸ್ಥೆ ಲೋಕಾಯುಕ್ತ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ? ವಿರೋಧ ಪಕ್ಷದ ನಾಯಕರಾಗಿ ಅವರು ನೀಡಿರುವ ಹೇಳಿಕೆ ಮ್ಯಾಚ್ ಫಿಕ್ಸಿಂಗಾ?” ಎಂದು ಕಿಡಿಕಾರಿದರು.