Homeಕರ್ನಾಟಕವಿವಿಧ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ, 18 ಹೊಸ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಶಂಕುಸ್ಥಾಪನೆ

ವಿವಿಧ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ, 18 ಹೊಸ ಕಾಮಗಾರಿಗಳಿಗೆ ನಿತಿನ್ ಗಡ್ಕರಿ ಶಂಕುಸ್ಥಾಪನೆ

ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಮತ್ತು 18 ಹೊಸ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, “ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಗ್ರೀನ್‌ ಕಾರಿಡಾರ್‌ ನಿರ್ಮಾಣ ಮಾಡುವುದು ನಮ್ಮ ಆದ್ಯತೆ. ಇಂತಹ ಹೆದ್ದಾರಿಗಳು ಪ್ರಯಾಣದ ಸಮಯ, ವೆಚ್ಚ ಕಡಿಮೆ ಆಗುವುದಲ್ಲದೇ ಅಭಿವೃದ್ಧಿಗೆ ಪೂರಕವಾಗಿವೆ” ಎಂದರು.

“ಕರ್ನಾಟಕವು ಸಂಪದ್ಭರಿತ ರಾಜ್ಯವಾಗಿದೆ. ಹೀಗಾಗಿ, ಕೇಂದ್ರವು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚು ಆದ್ಯತೆ ನೀಡಿದೆ. ರಾಜ್ಯದಲ್ಲಿ 8,200 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಇದ್ದು, ಇದನ್ನು ₹3 ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶೇ 90ರಷ್ಟು ಕಾಮಗಾರಿ ಮುಗಿದಿದೆ” ಎಂದು ಹೇಳಿದರು.

₹9,000 ಕೋಟಿ ಅಂದಾಜು ವೆಚ್ಚದಲ್ಲಿ ಬೆಳಗಾವಿ– ಹುನಗುಂದ– ರಾಯಚೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಇದರ ಈ ಕಾಮಗಾರಿ ಪೂರ್ಣಗೊಂಡರೆ ಬೆಳಗಾವಿ– ರಾಯಚೂರು ಮಧ್ಯದ ಪ್ರಯಾಣದ ಅವಧಿ ಮೂರೂವರೆ ತಾಸು ಕಡಿಮೆ ಆಗಲಿದೆ” ಸಚಿವರು ವಿವರಿಸಿದರು.

“ಬೆಳಗಾವಿ– ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಿ ಆರು ಮಾರ್ಗ ಮಾಡಲು ಬೇಡಿಕೆ ಇದೆ. ಇದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು” ಎಂದು ತಿಳಿಸಿದರು.

“ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಈ ಹಿಂದೆ ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವರ್ತುಲ ರಸ್ತೆ ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದರು. ಶೀಘ್ರದಲ್ಲೇ ಇದು ಕೈಗೂಡಲಿದೆ” ಎಂದು ಹೇಳಿದರು.

ಬೆಳಗಾವಿ–ಗೋವಾ ಬೈಪಾಸ್‌

“ಬೆಳಗಾವಿ–ಗೋವಾ ಬೈಪಾಸ್‌ ರಸ್ತೆ ಕಾಮಗಾರಿಗೆ ತುರ್ತಾಗಿ ಆಗಬೇಕಿದೆ. ಇದಕ್ಕೆ ₹3,400 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಲ್ಲದೇ, ಲೋಕೋಪಯೋಗಿ ಇಲಾಖೆಯಿಂದ 17 ಯೋಜನೆಗಳ ಬೇಡಿಕೆ ಸಲ್ಲಿಸಲಾಗಿದೆ. ಇವುಗಳನ್ನೂ ಸಕಾರಾತ್ಮಕವಾಗಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಸಿ.ಆರ್‌.ಎಫ್‌. ಅಡಿ ₹2,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಗಿದೆ” ಎಂದು ತಿಳಿಸಿದರು.

ಬೆಂಗಳೂರಿಗೆ ರಿಂಗ್ ರಸ್ತೆ

“ಬೆಂಗಳೂರಿಗೆ ₹17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಮಹಾನಗರದ ದಟ್ಟಣೆ ತಗ್ಗಿಸುವ ಉದ್ದೇಶದಿಂದ 2025ರೊಳಗೆ ಈ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದು ಬೆಂಗಳೂರಿಗೆ ಮಾತ್ರವಲ್ಲ; ಇಡೀ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡುವ ರಸ್ತೆ ಆಗಲಿದೆ” ಎಂದು ಗಡ್ಕರಿ ತಿಳಿಸಿದರು.

ಸಚಿವ ಸತೀಶ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲಾ ಅಂಗಡಿ, ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ, ವಿಠ್ಠಲ ಹಲಗೇಕರ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments