ಎರಡು ಲಾರಿಗಳೆ ನಡುವೆ ಡಿಕ್ಕಿ ಸಂಭವಿಸಿ ಅದರಲ್ಲಿ ಒಂದು ಕಂಟೈನರ್ ಲಾರಿ ಡಿವೈಡರ್ ಹಾರಿ ಇನ್ನೋವ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕಂಟೈನರ್ ಲಾರಿ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ವಿಜಯಪುರದ ಉದ್ಯಮಿ ಚಂದ್ರ ಯಾವಪ್ಪವೋಳ, 16 ವರ್ಷದ ಜಾನ್, 12 ವರ್ಷದ ದೀಕ್ಷಾ, 36 ವರ್ಷದ ವಿಜಯ ಲಕ್ಷ್ಮಿ, 42 ವರ್ಷದ ಗೌರಬಾಯಿ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮಗು, ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನೆಲಮಂಗಲ ಪೊಲೀಸರ ಭೇಟಿ ನೀಡಿದ್ದು ಕ್ರೇನ್ ಬಳಸಿ ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲಾಗಿದೆ. ಕಂಟೈನರ್ ಲಾರಿ ಮೇಲೆ ಬಿದ್ದ ಪರಿಣಾಮ ಇನ್ನೋವಾ ಕಾರು ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸರಣಿ ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು 10 ಕಿಲೋ ಮೀಟರ್ ವರೆಗೂ ಸಂಚಾರಕ್ಕೆ ಅಡ್ಡಿಯಾಗಿದ್ದು ಪೊಲೀಸರು ವಾಹನಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.