ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.
ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, “ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ನಿಂದ ದೂರವಾಗಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಫಯಾಜ್ ಕೊಲೆ ಮಾಡಿದ್ದಾನೆ” ಎಂದು ಹೇಳಿದರು.
“ಘಟನೆ ನಡೆದ ವೇಳೆ ಮಗಳ ಜೊತೆ ಇದ್ದ, ತಾಯಿ ಮೇಲೂ ಹಲ್ಲೆ ಮಾಡಲಾಗಿದೆ, ಆದರೆ ನೇಹಾ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಲವ್ ಜಿಹಾದ್ ಕಂಡು ಬಂದಿಲ್ಲ. ನನ್ನನ್ನು ಬಿಟ್ಟು ಬೇರೆಯವನ್ನು ಮದುವೆ ಮಾಡಿಕೊಳ್ಳುತ್ತೀಯಾ ಅಂತ ಕೂಪದಲ್ಲಿ ಕೊಲೆ ಮಾಡಿದ್ದಾನೆ” ಎಂದರು.
“ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ” ಎಂದು ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂಥಹ ಘಟನೆ ಮರುಕಳಿಸುತ್ತದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, “ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಘಟನೆಗಳು ನಡೆದ ಬಗ್ಗೆ ಮಾಹಿತಿ ಇದೆ. ಆರ್. ಅಶೋಕ್ ಮತ್ತು ಆರಗ ಜ್ಞಾನೇಂದ್ರ, ಬಸವರಾಜ್ ಬೊಮ್ಮಾಯಿ ಅವರು ಗೃಹಮಂತ್ರಿ ಇದ್ದಾಗ ಇಂಥಹ ಘಟನೆಗಳು ನಡೆದಿವೆ” ಎಂದು ತಿರುಗೇಟು ನೀಡಿದರು.
“ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿದ್ದು ದುರದೃಷ್ಟಕರ. ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಯಾರನ್ನೂ ರಕ್ಷಣೆ ಮಾಡಲ್ಲ. ರಾಮನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗುವುದು ಸಹಜ. ಅದಕ್ಕೆ ಇನ್ನೊಬ್ಬರು ಬೇರೆ ಘೋಷಣೆ ಕೂಗಿದ್ದಾರೆ. ಯಾರನ್ನೂ ರಕ್ಷಣೆ ಮಾಡುವುದಾಗಲಿ, ಓಲೈಸುವುದಾಗಲಿ ಮಾಡಲ್ಲ. ಯಾವುದೇ ಮುಲಾಜಿಲ್ಲದೆ ಕಾನೂನಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.