ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್‌ನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ, ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಹುಬ್ಬಳ್ಳಿಯ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಆರು ದಿನ ಆರೋಪಿಯನ್ನು ಸಿಐಡಿಗೆ ಒಪ್ಪಿಸಿದೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಿ, ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಹಿಂದೆ ಭರವಸೆ ನೀಡಿದ್ದರು.
“ನೇಹಾ ಸಾವಿಗೆ ನ್ಯಾಯ ಸಿಗಲಿದೆ. ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಹೈಕೋರ್ಟ್ಗೆ ಪತ್ರ ಬರೆಯುತ್ತೇವೆ. ತಪ್ಪಿಸ್ಥರಿಗೆ ಸೂಕ್ತ ಶಿಕ್ಷೆ ಆಗುತ್ತೆ” ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಭರವಸೆ ನೀಡಿದ್ದಾರೆ.