ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ ಆರೋಪಿ ಫಯಾಜ್ ಯತ್ನಿಸಿದ್ದ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, “ಮತಾಂತರ ಆಯಾಮದಿಂದಲೇ ತನಿಖೆಯಾಗಬೇಕು. ನೇಹಾ ಅವರನ್ನು ಮತಾಂತರ ಮಾಡಲು ಫಯಾಜ್ ಯತ್ನಿಸಿದ್ದ. ಈ ಬಗ್ಗೆ ನೇಹಾ ತಂದೆ ನಿರಂಜನ ಹಿರೇಮಠ ಕೂಡ ಆರೋಪ ಮಾಡಿದ್ದಾರೆ” ಎಂದರು.
“ನೇಹಾ ತಂದೆ ನಿರಂಜನ ಅವರು ನೀವೇ ನ್ಯಾಯ ಕೊಡಿಸಬೇಕು ಅಂದಿದ್ದರು. ಹೀಗಾಗಿ ನಾವು ಸಂವೇದಾನಶೀಲದಿಂದ ಹೋರಾಟ ಮಾಡಿದೆವು. ಕಾಂಗ್ರೆಸ್ ಪಕ್ಷದವರು ಅಸಭ್ಯ, ಅಸಡ್ಡೆಯಿಂದ ಮಾತನಾಡಿದರು” ಎಂದು ಹೇಳಿದರು.
“ಕಾಂಗ್ರೆಸ್ ಪಕ್ಷದ್ದು ದ್ವಂದ್ವ ನಿಲುವು ಅನ್ನೋದಕ್ಕೆ ನೇಹಾ ಹಿರೇಮಠ ಪ್ರಕರಣವೂ ಒಂದು. ಜನರ ಜೀವದ ಜೊತೆ ಚೆಲ್ಲಾಟ ಆಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಇವರ ಡಬಲ್ ಸ್ಟ್ಯಾಂಡರ್ಡ್” ಎಂದು ಕಿಡಿಕಾರಿದರು.
“ಕರ್ನಾಟಕದಲ್ಲಿ ಮುಸ್ಲಿಮರಿಗೆ ಯಾಕೆ ಧರ್ಮಾಧಾರಿತ ಮೀಸಲಾತಿ ಕೊಟ್ಟಿದೀರಿ? ಕರ್ನಾಟಕದಲ್ಲಿ ಹಿಂದುಳಿದ ದಲಿತರ, ಮೀಸಲಾತಿಯನ್ನು ಮುಸ್ಲಿಮರಿಗೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ನೀವು ವಸೂಲಿಗೆ ಬರುತ್ತೀರಿ” ಎಂದು ರಣದೀಪ್ ಸುರ್ಜೆವಾಲಾ ವಿರುದ್ಧ ಜೋಶಿ ಹರಿಹಾಯ್ದರು.