ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ಕಚೇರಿ ಇರಬೇಕು ಎಂಬ ಆದೇಶವಿದೆ. ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಕಚೇರಿಯಲ್ಲಿ ತೆರೆದಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ಕೋರಮಂಗಲದ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ನಡೆದ ‘ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಹಾಗೂ ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ನಿರ್ವಹಣ ದಳ ಪ್ರಾಮಾಣಿಕವಾಗಿ ಕೆಲಸ ಮಾಡಿ ರಾಜ್ಯದ ಜನಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಇಲಾಖೆಯ ಕೆಲಸ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೀರಿ. ಭವಿಷ್ಯ ಉಜ್ವಲವಾಗಿರಲಿ” ಎಂದರು.
“ಅವಘಡಗಳಲ್ಲಿ ಬೆಂಕಿ ನಂದಿಸಲು 90 ಮೀಟರ್‌ವರೆಗೆ ನೀರು ತಲುಪಿಸಬಹುದಾದ ಏರಿಯಲ್ ಲ್ಯಾಡರ್ ಅಳವಡಿಸಿಕೊಳ್ಳಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಇದು ಇಲ್ಲ. ಅಲ್ಲದೇ, ಮೊದಲ ಬಾರಿಗೆ ಇಲಾಖೆಯ ವಾಹನಗಳಿಗೆ ಪೆಟ್ರೋಲ್ ಕಾರ್ಡ್ ಸವಲತ್ತು ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ರಾಜ್ಯದ ಅಗ್ನಿಶಾಮಕ ದಳ ಎಂದರೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ. ಹೊಸದಾಗಿ ಇಲಾಖೆಗೆ ನೇಮಕ ಹೊಂದಿರುವ ಸಿಬ್ಬಂದಿಗಳಿಗೆ ತಮಗೆ ತರಬೇತಿ ನೀಡಲಾಗಿದೆ. ಮುಂದಿನ ಮುವತ್ತೈದು ವರ್ಷ ನಿಮ್ಮ ಜೊತೆಗೆ ಇರುತ್ತದೆ. ಕರ್ತವ್ಯದಲ್ಲಿ ಶಿಸ್ತು ಪಾಲನೆ ಮೂಲಕ ಇಲಾಖೆಯ ಕೀರ್ತಿ ಹೆಚ್ಚಿಸಬೇಕು” ಎಂದರು.
“ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಯಾವುದೇ ಧರ್ಮ, ರಾಜಕೀಯ, ವ್ಯಕ್ತಿಗೆ ಕೆಲಸ ಮಾಡುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಿಮಗೆ ಪ್ರಮಾಣ ಬೋದನೆ ಮಾಡಲಾಗಿದೆ. ಅದೇ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದದವು ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಗೆ ನೇಮಕಾತಿ ಹೊಂದುತ್ತಿದ್ದಾರೆ. ಇದು ಸಂತೋಷದಾಯಕ ವಿಚಾರ. ಈ ಭಾಗದವರು ಸಹ ನೇಮಕ ಹೊಂದಲು ಆಸಕ್ತಿ ತೋರಬೇಕು” ಎಂದು ಹೇಳಿದರು.
“ಬಿಜಾಪುರದ ಇಂಡಿ ತಾಲ್ಲೂಕಿನ ಲಚ್ಚಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಮಗುವನ್ನು ನಮ್ಮ ಸಿಬ್ಬಂದಿ ನಿರಂತರ ಕಾರ್ಯಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ್ದಾರೆ ಎಂಬುದನ್ನು ಕೇಳಲು ಸುಲಭ. ಆದರೆ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನು ಜ್ಞಾಪಿಸಿಕೊಳ್ಳದೆ ಸತತ 19 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸುವೆ” ಎಂದರು.
“ರಾಮೇಶ್ವರ ಕೆಫೆ ಸ್ಪೋಟದ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಕೋರಮಂಗಲದ ಪಬ್‌ನಲ್ಲಿ 16 ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಭಯದಿಂದ ಕಟ್ಟಡದ ಮೇಲಿಂದ ಹಾರಿದ್ದ ವ್ಯಕ್ತಿಯನ್ನು ರಕ್ಷಿಸಿ ಪ್ರಾಣ ಉಳಿಸಿದರು. ಮಡಿಕೇರಿಯಲ್ಲಿ ಭೂಕುಸಿತ ಸಂಭವಿಸಿ ಹತ್ತಾರು ಜನ ಪ್ರಾಣ ಕಳೆದುಕೊಂಡರು. ಎಸ್‌ಡಿಆರ್‌ಎಫ್‌ನವರು ಯಾವುದೇ ಭಯವಿಲ್ಲದೇ ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳು ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿರುವುದನ್ನು ಗೃಹ ಸಚಿವನಾಗಿ ಹತ್ತಿರದಿಂದ ನೋಡಿದ್ದೆನೆ” ಎಂದು ಹೇಳಿದರು.