ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ‘ಗಾಳಿಬೀಡು’ ಗ್ರಾಮ ಪಂಚಾಯಿತಿ ಪ್ರಥಮ ಸ್ಥಾನ ಹಾಗೂ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 9 ವಿಷಯಾಧಾರಿತಗಳನ್ನು ತನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಿದ್ದಕ್ಕಾಗಿ ಉಡುಪಿ ಜಿಲ್ಲಾ ಪಂಚಾಯಿತಿಗೆ ರಾಷ್ಟ್ರ ಮಟ್ಟದ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ದಡಿ ತೃತೀಯ ಸ್ಥಾನಗಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ
“ರಾಜ್ಯ ಮಟ್ಟದ ಸಮಿತಿಯು ಪ್ರಥಮ ಮೂರು ಗ್ರಾಮ ಪಂಚಾಯಿತಿಗಳನ್ನು ಪರಶೀಲಿಸಿ ರಾಜ್ಯ ಮಟ್ಟದಿಂದ ವಿಷಯವಾರು ಪ್ರಥಮ ಸ್ಥಾನ ಪಡೆದ ಗ್ರಾಮ ಪಂಚಾಯಿತಿಯನ್ನು ರಾಷ್ಟ್ರ ಮಟ್ಟಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ವಿಷಯವಾರು ಪಂಚಾಯಿತಿಗಳು ರಾಷ್ಟ್ರ ಮಟ್ಟದ ಸಮಿತಿಯು ಆಯ್ಕೆ ಮಾಡುತ್ತದೆ. ಸರಿ ಸುಮಾರು 2.5 ಲಕ್ಷ ಗ್ರಾಮ ಪಂಚಾಯಿತಿಗಳ ಪೈಕಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿಯು ಬಡತನ ಮುಕ್ತ ಮತ್ತು ಜೀವನೋಪಾಯ ಅಭಿವೃದ್ಧಿ ವಿಷಯದಲ್ಲಿ ‘ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸತತ ವಿಕಾಸ ಪುರಸ್ಕಾರ’ ಪ್ರಥಮ ಸ್ಥಾನಗಳಿಸಿರುತ್ತದೆ” ಎಂದು ತಿಳಿಸಿದ್ದಾರೆ.
“ಅಲ್ಲದೇ 9 ವಿಷಯಗಳಲ್ಲಿ ತನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಸರ್ವೋತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪಂಚಾಯಿತಿ ರಾಷ್ಟ್ರ ಮಟ್ಟದಲ್ಲಿ ‘ನಾನಾಜೀ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ’ದಡಿ ತೃತೀಯ ಸ್ಥಾನಗಳಿಸಿರುತ್ತದೆ” ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.