ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಬಿಜೆಪಿಯವರು ನನ್ನ ವಿರುದ್ಧದ ವೈಯಕ್ತಿಕ ದಾಳಿಯಲ್ಲಿ ತೃಪ್ತಿ ಕಾಣುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ ಬೆನ್ನಲ್ಲೇ ಛಲವಾದಿ ನಾರಾಯಣಸ್ವಾಮಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
“ಆನೆ ನಡೆಯುವಾಗ ನಾಯಿ ಬೊಗುಳುತ್ತದೆ. ಹಾಗೆಯೇ ಪ್ರಧಾನಿ ದೇಶದ ಪರವಾಗಿ ಇರುವಾಗ ಪ್ರಿಯಾಂಕ್ ಖರ್ಗೆ ನಾಯಿತರ ಬೋಗಳುತ್ತಾರೆ” ಎಂದು ಛಲವಾದಿ ನಾರಾಯಣಸ್ವಾಮಿ ನಾಲಿಗೆ ಹರಿಬಿಟ್ಟಿದ್ದರು.
ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿದ ಖರ್ಗೆ, “ಬಿಜೆಪಿಯವರ ದ್ವೇಷದ ಹೇಳಿಕೆಗಳು ನನಗೆ ಹೊಸದಲ್ಲ, ನಾನು ಇವರ ಹಗರಣಗಳನ್ನು ಬಯಲಿಗಿಟ್ಟಿದ್ದೇ ಈ ವೈಯಕ್ತಿಕ ನಿಂದನೆಗಳಿಗೆ ಕಾರಣ ಎನ್ನುವುದೂ ನನಗೆ ತಿಳಿದಿದೆ. ಗಂಗಾ ಕಲ್ಯಾಣ ಹಗರಣ, ಬಿಟ್ ಕಾಯಿನ್ ಹಗರಣ, KKRDB ಹಗರಣ, ಕೋವಿಡ್ ಹಗರಣ ಹಾಗೂ PSI ಹಗರಣಗಳನ್ನು ಜನರ ಮುಂದಿಟ್ಟಿದ್ದನ್ನು ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. RSS ನವರನ್ನು ಸೈದ್ದಂತಿಕ ನೆಲೆಗಟ್ಟಿನಲ್ಲಿ ಬೆತ್ತಲುಗೊಳಿಸುತ್ತಿರುವುದೂ ಸಹ ಬಿಜೆಪಿಗರ ಈ ಅಸಹನೆಗೆ ಪ್ರಮುಖ ಕಾರಣ” ಎಂದು ತಿರುಗೇಟು ನೀಡಿದ್ದರು.
“ಈ ಹಿಂದೆ ಕಾನ್ವೆಂಟ್ ದಲಿತ ಎಂದಿದ್ದರು, ಪ್ರಿಯಾಂಕ್ ಎನ್ನುವ ಹೆಸರು ಹೆಣ್ಣೋ ಗಂಡೋ ಗೊತ್ತಿಲ್ಲ ಎಂದಿದ್ದರು, ದೇಹ ಬೆಳದಿದೆ, ಬುದ್ದಿ ಬೆಳೆದಿಲ್ಲ ಎಂದಿದ್ದರು, ಬಿಜೆಪಿಯ ಅಭ್ಯರ್ಥಿ ನನ್ನ ಕುಟುಂಬವನ್ನು ಮುಗಿಸುತ್ತೇನೆ ಎಂದು ಸಂಚು ರೂಪಿಸಿದ್ದರು, ಬಿಜೆಪಿಯವರನ್ನು ಪ್ರಶ್ನಿಸುವ ಕಾರಣಕ್ಕೆ ಪೈಲ್ಸ್ ಬಂದಿದೆ ಎಂದಿದ್ದರು, ಹಾಲು ಜಾಸ್ತಿ ಕುಡಿದಿದ್ದೇನೆ ಎಂದಿದ್ದರು, ಈಗ ಹೊಸದಾಗಿ ನಾಯಿ ಎಂಬ ಪದವನ್ನೂ ಬಳಸಿದ್ದಾರೆ. ಬಿಜೆಪಿಯವರ ಈ ಎಲ್ಲ ನಿಂದನೆಗಳು ನನ್ನ ವಿರುದ್ಧ ಅವರಿಗಿರುವ ಅಪರಿಮಿತ ಅಸಹನೆಯನ್ನು ತೋರಿಸುತ್ತದೆ. ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ ಮತ್ತು ವೈಯಕ್ತಿಕ ನಿಂದನೆ ಎನ್ನುವ ನಾಣ್ಣುಡಿಗೆ ಬಿಜೆಪಿಯವರೇ ಉದಾಹರಣೆಯಾಗಿದ್ದಾರೆ” ಎಂದು ಕಿಡಿಕಾರಿದ್ದರು.
ಛಲವಾದಿ ಅವರ ಈ ಹೇಳಿಕೆ ಕಲಬುರಗಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಯಿತು. ರಾಜಕೀಯವಾಗಿ ನಮ್ಮನಾಯಕರನ್ನು ನೀವು ಏನೇ ಟೀಕೆ ಮಾಡಿದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕವಾಗಿ ನಾರಯಣಸ್ವಾಮಿ ಬೈಯ್ದಿದ್ದಾರೆ. ಅದಕ್ಕಾಗಿ ಅವರು ಕ್ಷಮೆ ಕೇಳಲೇಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ನಾರಯಣಸ್ವಾಮಿ ಚಿತ್ತಾಪುರದ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ ಗೇಟ್ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಛಲುವಾದಿ ನಾರಯಣಸ್ವಾಮಿ ಕ್ಷಮೆ ಕೇಳಲೆಬೇಕು, ಅಲ್ಲಿಯವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದರು. ಈ ವೇಳೆ ಛಲವಾದಿ ನಾರಾಯಣಸ್ವಾಮಿ ಅವರ ಕಾರಿನ ಮೇಲೆ ಬಣ್ಣ ಎರಚಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟರಲ್ಲಿ ಈ ವಿಷಯ ರಾಜ್ಯ ಬಿಜೆಪಿ ಹಿರಿಯ ನಾಯಕರ ಗಮನಕ್ಕೂ ಬಂದಿತ್ತು. ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ನಾರಯಣಸ್ವಾಮಿಗೆ ಪೋನ್ ಮಾಡಿ, ಹೇಳಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಆ ರೀತಿ ಉಲ್ಲೇಖಿಸಬಾರದಿತ್ತು ಎಂದಿದ್ದಾರೆ.
ನಂತರ ವಿಷಾದ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, “ಪ್ರಿಯಾಂಕ್ ಖರ್ಗೆಯವರ ಹೆಸರನ್ನು ತೆಗೆದುಕೊಂಡು ಹೇಳಬಾರದಿತ್ತು. ನಮ್ಮ ನಾಯಕರಾದ ಯಡಿಯೂರಪ್ಪನವರು ಸೂಚಿಸಿದಂತೆ ಆ ಹೆಸರನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಇದರಿಂದ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದರು.