Homeಕರ್ನಾಟಕಮುಡಾ ಹಗರಣ | ನನ್ನ ಪತ್ನಿ ವಿಷಯ ವಿವಾದವೇ ಅಲ್ಲ, ಆದ್ರೂ ಬಿಜೆಪಿ ರಾಜಕೀಯ ಮಾಡುತ್ತಿದೆ:...

ಮುಡಾ ಹಗರಣ | ನನ್ನ ಪತ್ನಿ ವಿಷಯ ವಿವಾದವೇ ಅಲ್ಲ, ಆದ್ರೂ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ನನ್ನ ಪತ್ನಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜುಲೈ 15ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಮುಡಾ ಹಗರಣದ ಬಗ್ಗೆ ಪ್ರಸ್ತಾಪವಾದರೆ ಉತ್ತರ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನನ್ನ ಪತ್ನಿಗೆ ಬದಲಿ ನಿವೇಶನ ಕೊಟ್ಟಿದ್ದನ್ನು ಬಿಜೆಪಿಯವರು ವಿವಾದ ಮಾಡುತ್ತಿದ್ದಾರೆ. ಅದು ವಿವಾದದ ವಿಷಯವೇ ಅಲ್ಲ. ಎಲ್ಲವೂ ಕಾನೂನು ಬದ್ಧವಾಗಿಯೇ ನಡೆದಿದೆ” ಎಂದರು.

“ಮುಡಾದಿಂದ ಶೇ.50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡದಂತೆ 2019ರಲ್ಲೇ ಆದೇಶಿಸಲಾಗಿದೆ. ಅದಾದ ಮೇಲೂ ಕೆಲವರಿಗೆ ನಿವೇಶನ ನೀಡಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.

ರಾಜಕಾರಣಕ್ಕಾಗಿ ಬಿಜೆಪಿ ಪ್ರತಿಭಟನೆ

“ಭೂಮಿ ಕಳೆದುಕೊಂಡವರ ಪ್ರಕರಣವೇ ಬೇರೆ. ನಮ್ಮ ಜಮೀನನ್ನು ಕಾನೂನಿಗೆ ವಿರುದ್ಧವಾಗಿ ಪಡೆದುಕೊಂಡ ಪ್ರಕರಣವಿದು. ನಮ್ಮ ಜಮೀನಿಗೆ ಪರಿಹಾರ ಕೊಡಿ ಎಂದು ಪತ್ನಿ ಕೇಳಿದ್ದರು. ವಿಜಯನಗರದಲ್ಲೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿರುವುದು ತಪ್ಪು ಎಂದು ಪ್ರಾಧಿಕಾರವೇ ಒಪ್ಪಿ ನಿವೇಶನ ನೀಡಿದೆ. ಹೀಗಿರುವಾಗ ಇದರಲ್ಲಿ ವಿವಾದವೇನಿದೆ” ಎಂದು ಪ್ರಶ್ನಿಸಿದರು.

“ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ನಮ್ಮವರೇ ಸಮರ್ಥರಿದ್ದಾರೆ. ಮುಡಾದಲ್ಲಿ ನಡೆದಿರುವ ಅಕ್ರಮದ ಕುರಿತು ಇಬ್ಬರು ಐಎಎಸ್‌ ಅಧಿಕಾರಿಗಳ ತಂಡದಿಂದ ತನಿಖೆ ಮಾಡಿಸುತ್ತಿದ್ದೇವೆ. ನಿವೇಶನಗಳು ಹಂಚಿಕೆ ಆಗಿರುವುದನ್ನು ಅಮಾನತಿನಲ್ಲಿಟ್ಟಿದ್ದೇವೆ. ಕಾನೂನು ಬಾಹಿರ ಎಂದು ವರದಿ ಬಂದರೆ, ಸಂಬಂಧಿಸಿದವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ” ಎಂದರು.

ರಾಮನಗರ ಜಿಲ್ಲೆ ಮರುನಾಮಕರಣ ವಿಚಾರವಾಗಿ ಮಾತನಾಡಿ, “ರಾಮನಗರ ಜಿಲ್ಲೆಯ ಎಲ್ಲಾ ಮುಖಂಡರೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ನೇತೃತ್ವದಲ್ಲಿ ಮಂಗಳವಾರ ನನ್ನ ಬಳಿಗೆ ಬಂದು, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ, ಸಚಿವ ಸಂಪುಟ ಸಭೆಯಲ್ಲಿಟ್ಟು ನಿರ್ಧಾರ ಮಾಡುತ್ತೇನೆ ಎಂದಿದ್ದೇನೆ” ಎಂದು ಹೇಳಿದರು.

‘ರಾಮನಗರ ಹೆಸರು ಬದಲಾಯಿಸಿದರೆ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಹೆಸರು ಕಿತ್ತುಹಾಕುತ್ತೇವೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, “ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತು ಹಾಕುವುದು? ಅದೆಲ್ಲವೂ ಅವರ ಭ್ರಮೆ” ಎಂದು ಕುಟುಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments