ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕನ್ನಡಿಗರು ಕೆಲವು ಪ್ರಶ್ನೆಗಳಿಗೆ ತಮ್ಮಿಂದ ಉತ್ತರ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೇಳಿದ್ದಾರೆ.
ಎಕ್ಸ್ ತಾಣದಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, “2013ರ ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಯ ಆಸ್ತಿ ಉಲ್ಲೇಖ ಮಾಡದೆ ತಪ್ಪು ಮಾಹಿತಿ ನೀಡುತ್ತೀರಿ. ನಂತರ 2018ರಲ್ಲಿ ಅದರ ಮಾರುಕಟ್ಟೆ ಮೌಲ್ಯ ₹25 ಲಕ್ಷ ಎಂದು ನಮೂದಿಸಿದ್ದೀರಿ. 5 ವರ್ಷಗಳಾದ ಮೇಲೆ ದಿಢೀರನೆ ಆಸ್ತಿ ಹೊಂದಿರುವ ಬಗ್ಗೆ ಜ್ಞಾನೋದಯವಾಯಿತಾ” ಎಂದು ಪ್ರಶ್ನಿಸಿದ್ದಾರೆ.
“ಈಗ ಹಗರಣ ಬೆಳಕಿಗೆ ಬಂದಮೇಲೆ ₹63 ಕೋಟಿ ಕೊಡಿ ಸೈಟು ಬಿಟ್ಟುಕೊಡುತ್ತೇನೆ ಎಂದು ಹೇಳುತ್ತೀರಿ. 2018ರಲ್ಲಿ ₹25 ಲಕ್ಷ ಇದ್ದ ಆಸ್ತಿ ಮೌಲ್ಯ, 2024ರಲ್ಲಿ ₹63 ಕೋಟಿ ಆಗಲು ಹೇಗೆ ಸಾಧ್ಯ? ಇದೇನಾದರೂ ರಾಹುಲ್ ಗಾಂಧಿ ಅವರ ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಯೋಜನೆಯ ಭಾಗವಾ?” ಎಂದು ಲೇವಡಿ ಮಾಡಿದ್ದಾರೆ.
“50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಕೊಡುವುದು ಬೇಡ ಎಂದು ನಗರಾಭಿವೃದ್ಧಿ ಇಲಾಖೆ ಆದೇಶವಿದ್ದರೂ ಅದನ್ನ ಉಲ್ಲಂಘಿಸಿ ಮೂಡಾ ಅಧ್ಯಕ್ಷ ಮರಿಗೌಡ ಅವರು ಹಗರಣದ ಬಾಗಿಲನ್ನು ತೆಗೆದಿದ್ದು ಏಕೆ? ಇದರ ಹಿಂದೆ ಯಾವ ಪ್ರಭಾವಿ ಶಕ್ತಿ ಕೆಲಸ ಮಾಡುತ್ತಿತ್ತು” ಎಂದು ಅಶೋಕ್ ಕೇಳಿದ್ದಾರೆ.