ಮುಡಾ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ತಪ್ಪು ಆಗಿಲ್ಲ. ಇದೊಂದು ಬಿಜೆಪಿ ನಾಟಕ ಅಷ್ಟೇ, ಎಷ್ಟು ದಿನ ನಾಟಕ ನಡೆಯುತ್ತದೆ ಎಂದು ನೋಡೋಣ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತೇವೆ. ಬಿಜೆಪಿ, ಜೆಡಿಎಸ್ ನವರು ಸಿಎಂ ಕುಟುಂಬದ ಹೆಸರು ಇರುವುದಕ್ಕೆ ಇದನ್ನು ಇಷ್ಟು ದೊಡ್ಡದು ಮಾಡುತ್ತಿದ್ದಾರೆ. ಹಾಗಾದರೆ ಸಿಎಂ ಕುಟುಂಬದ ಜಮೀನು 3 ಎಕರೆ 16 ಗುಂಟೆ ವಾಪಸ್ ಕೊಡಲು ಆಗುತ್ತಾ” ಎಂದು ಪ್ರಶ್ನಿಸಿದರು.
“ಸಿಎಂ ಅವರ ವ್ಯಕ್ತಿತ್ವ ಹಾಳು ಮಾಡಲು ಬಿಜೆಪಿ ಕುತಂತ್ರ ಮಾಡುತ್ತಿದೆ. ಅವತ್ತು ಸೈಟ್ ಕೊಟ್ಟು, ಈಗ ಸದನದಲ್ಲಿ ಬಂದು ಚರ್ಚೆ ಮಾಡಿದ್ರೆ ಹೇಗೆ? ಸಭೆಯಲ್ಲಿ ಸ್ಪೀಕರ್ ರೂಲಿಂಗ್ ವಿರುದ್ಧ ಹೋಗಲು ಆಗುತ್ತಾ?” ಎಂದು ಕೇಳಿದರು.
“ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ತಪ್ಪಾಗಿದ್ರೆ ನಾವೇ ಶರಣಾಗುತ್ತೇವೆ. ಸುಮ್ಮನೆ ಸಿದ್ದರಾಮಯ್ಯ ಘನತೆ ಹಾಳು ಮಾಡಬೇಡಿ. ರಾಜ್ಯದ ಜನ ಇದನ್ನು ನಂಬುವುದಿಲ್ಲ. ಸಿದ್ದರಾಮಯ್ಯ ವ್ಯಕ್ತಿತ್ವ ರಾಜ್ಯಕ್ಕೆ ಗೊತ್ತಿದೆ” ಎಂದರು.
“ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸ್ತೇವೆ ಎಂಬ ಆಸೆ ಇದ್ರೆ ಬಿಜೆಪಿ ಬಿಟ್ಟುಬಿಡಲಿ. ಅವರಿಗೆ ಸೈಟ್ ಕೊಟ್ಟವರು ಅವರೇ. ಈಗ ಕೂಗಾಡುತ್ತಿರುವವರು ಅವರೇ” ಎಂದು ಶಿವಲಿಂಗೇಗೌಡ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ
“ಮುಡಾ ಪ್ರಕರಣವನ್ನು ರಾಜ್ಯ ಸರಕಾರ ಜು.14ರಂದೇ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ತನಿಖೆಯ ಚೌಕಟ್ಟು ಕೂಡ ನಿಗದಿಯಾಗಿದೆ. ಹೀಗಾಗಿ, ನ್ಯಾಯಿಕ ಸ್ವರೂಪದ ಈ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶವಿಲ್ಲ” ಎಂದರು.