Homeಕರ್ನಾಟಕಮುಡಾ ಅಕ್ರಮ | ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಮುಡಾ ಅಕ್ರಮ | ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಸದನದಲ್ಲಿ ಮುಡಾ ವಿಚಾರವಾಗಿ ಚರ್ಚಿಸಲು ಅವಕಾಶ ನೀಡದೆ ಇರುವುದನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ನಾಯಕರು ಗುರುವಾರ ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ದೂರು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ- ಜೆಡಿಎಸ್ ಪ್ರಮುಖರು ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ಭಾಗವಹಿಸಿದ್ದರು.

ಚರ್ಚಿಸಿ ಮುಂದಿನ ಹೋರಾಟ: ವಿಜಯೇಂದ್ರ

“ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮುಂದಿನ ದಿನಗಳಲ್ಲಿ ನಡೆಸಲಿರುವ ಹೋರಾಟದ ಕುರಿತು ನಾವು ಮತ್ತು ನಮ್ಮ ಎನ್‍ಡಿಎ ಭಾಗೀದಾರ ಪಕ್ಷ ಜೆಡಿಎಸ್ ಜೊತೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ” ಎಂದು ಶಾಸಕ ಬಿ ವೈ ವಿಜಯೇಂದ್ರ ಪ್ರಕಟಿಸಿದರು.

ಕಲಾಪವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಇ.ಡಿ ವಿರುದ್ಧ ಧರಣಿ ನಡೆಸಿದ್ದಲ್ಲದೆ, ಇ.ಡಿ ವಿರುದ್ಧ ಎಫ್‍ಐಆರ್ ದಾಖಲಿಸಿ ಬೆದರಿಸುವ ತಂತ್ರಗಾರಿಕೆ ಮಾಡಿದ್ದಾರೆ” ಎಂದು ಆರೋಪಿಸಿದರು.

“ವಾಲ್ಮೀಕಿ ಹಗರಣ ಎಲ್ಲಿ ತಮ್ಮ ಬುಡಕ್ಕೆ ಬರಲಿದೆಯೋ ಎಂದು ಮುಖ್ಯಮಂತ್ರಿಗಳು ಹೆದರಿಕೊಂಡಿದ್ದಾರೆ. ಮೂಡ ಹಗರಣದಲ್ಲಿ ಸಿದ್ದರಾಮಯ್ಯನವರು ಚರ್ಚೆ ನಡೆಸಿ ವಿಪಕ್ಷಕ್ಕೆ ಸವಾಲು ಹಾಕಲಿದ್ದಾರೆ ಎಂದು ನಿರೀಕ್ಷೆಯಲಿದ್ದೆವು. ಆದರೆ, ಮುಖ್ಯಮಂತ್ರಿಗಳು ಪಲಾಯನವಾದ ಮಾಡಿದ್ದಾರೆ. ಚರ್ಚೆಯಿಂದ ಓಡಿ ಹೋಗುವ ಕೆಲಸ ಮಾಡಿದ್ದಾರೆ” ಎಂದು ಟೀಕಿಸಿದರು.

“ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕು; ಮಾನ್ಯ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂಬ ಒತ್ತಾಯವನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ ಎಂದು ವಿವರಿಸಿದರು.

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, “ಈ ಸರಕಾರವು ಬೃಹತ್ ಹಗರಣಗಳಲ್ಲಿ ಪಾಲ್ಗೊಂಡಿರುವುದು ಜಗಜ್ಜಾಹೀರಾಗಿದೆ. ಇತಿಹಾಸದಲ್ಲಿ ಯಾವುದೇ ಸದನದಲ್ಲೂ ಆಡಳಿತ ಪಕ್ಷಕ್ಕೆ ಈ ರೀತಿಯ ಅವಮಾನ ಆಗಿಲ್ಲ. ಮುಖ್ಯಮಂತ್ರಿಗಳೇ ಲೂಟಿ ಮಾಡಿದ 2 ಹಗರಣಗಳು ಚರ್ಚೆಗೆ ಬಂದಿವೆ” ಎಂದರು.

“3 ರಿಂದ 4 ಸಾವಿರ ಕೋಟಿಯ ಮೂಡ ಹಗರಣ, 187 ಕೋಟಿಯ ವಾಲ್ಮೀಕಿ ನಿಗಮದ ಹಗರಣಗಳು ನಡೆದಿವೆ. ಸಿದ್ದರಾಮಯ್ಯನವರು ಹಿಂದೆ ಡಿಸಿಎಂ ಆಗಿದ್ದಾಗ ಮೂಡ ಹಗರಣ ಆರಂಭವಾಗಿತ್ತು. ಸಿಎಂ ಪತ್ನಿಗೆ 14 ನಿವೇಶನ, ಇವರ ಬೆಂಬಲಿಗರಿಗೆ ನೂರಾರು ನಿವೇಶನ ಹಂಚಿ ಲೂಟಿ ಮಾಡಿದ್ದಾರೆ” ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿ, “ಕಾನೂನಿನಡಿ ಎಸ್.ಸಿ ಜಮೀನನ್ನು ಕೊಂಡುಕೊಳ್ಳುವುದು ತಪ್ಪು. ತಪ್ಪು ಮಾಡಿದ್ದು ಗೊತ್ತಿದ್ದ ಕಾರಣ ಸದನದಲ್ಲಿ ಉತ್ತರಿಸದೆ, ದಾಖಲೆ ಮಂಡನೆಗೆ ಅವಕಾಶ ಕೊಡದೆ, ಹೊರಗಡೆ ಉತ್ತರ ಕೊಟ್ಟಿದ್ದಾರೆ” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments