ಶ್ರೀಮಾನ್ ಸಿದ್ದರಾಮಯ್ಯನವರೇ, ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇ ಉಘೇ ಎನ್ನಲೇಬೇಕು. ಅಂದು ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೆ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ! ಇಂದು ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಕುಮಾರಸ್ವಾಮಿ ಹಿಟ್ ಬ್ಯಾಕ್ ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು” ಎಂದು ಕುಟುಕಿದ್ದಾರೆ.
“ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ” ಎಂದಿದ್ದಾರೆ.
“ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ. ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ? ಮುಡಾಸಿದ್ವಿಲಾಸ” ಎಂದು ವ್ಯಂಗ್ಯವಾಡಿದ್ದಾರೆ.