ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಎಸ್ಪಿ ಉದೇಶ್ ಗುರುವಾರ ಮಧ್ಯಂತರ 8,000 ಪುಟಗಳ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ 50 ಮಂದಿ ಹೇಳಿಕೆಗಳನ್ನು ನಮೂದಿಸಲಾಗಿದೆ. ವರದಿ ಜೊತೆಗೆ ಕೆಲ ದಾಖಲಾತಿಗಳನ್ನೂ ಸಲ್ಲಿಸಲಾಗಿದ್ದು, ವರದಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.
ವಿಚಾರಣೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣದ ನಾಲ್ವರು ಆರೋಪಿಗಳಾದ ಸಿದ್ದರಾಮಯ್ಯ (ಎ-1 ಆರೋಪಿ), ಪಾರ್ವತಿ (ಎ-2 ಆರೋಪಿ), ಮಲ್ಲಿಕಾರ್ಜುನ ಸ್ವಾಮಿ (ಎ-3 ಆರೋಪಿ) ಹಾಗೂ ದೇವರಾಜು (ಎ-4 ಆರೋಪಿ) ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಂತಹ ಸಾಕ್ಷ್ಯಗಳು ತನಿಖೆ ವೇಳೆ ಪತ್ತೆಯಾಗಿಲ್ಲ. ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ. ಕಾನೂನಿನ ತಪ್ಪು ತಿಳಿವಳಿಕೆಯಿಂದ ಆಗಿರುವಂತಹದ್ದಾಗಿದೆ. ತನಿಖೆ ನಡೆಸಲು ಮತ್ತು ಕ್ರಮ ತೆಗೆದುಕೊಳ್ಳಲು ತಕ್ಕುದಾದ ಪ್ರಕರಣವಾಗಿರುವುದಿಲ್ಲ. ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ ಎಂದು ಕಾರಣಗಳನ್ನು ಲೋಕಾಯುಕ್ತ ವರದಿ ನೀಡಿದೆ.
ಪ್ರಕರಣವು ಸಿವಿಲ್ ಸ್ವರೂಪದಾಗಿದ್ದು, ತನಿಖೆ ನಡೆಸಲು ತಕ್ಕುದಲ್ಲ. ಕಾನೂನಿನ ತಪ್ಪು ತಿಳುವಳಿಕೆ, ಕ್ರಮ ಜರುಗಿಸಲು ಸರಿಯಾದದ್ದು ಅಲ್ಲ. ಪ್ರಮುಖವಾಗಿ ಸಾಕ್ಷ್ಯಾಧಾರಗಳ ಕೊರತೆ ಕಂಡು ಬಂದಿದೆ. ಇದರಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಬಗ್ಗೆ ಆಕ್ಷೇಪಣೆಗಳಿದ್ದರೆ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅಧಿಕಾರಿಗಳು ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಬುಧವಾರ ನೋಟಿಸ್ ಜಾರಿ ಮಾಡಿದ್ದರು.
ಈ ಬೆಳವಣಿಗೆಯ ಕುರಿತು ಮಾತನಾಡಿದ ಲೋಕಾಯುಕ್ತ ಎಸ್ಪಿ ಉದೇಶ್, “ತನಿಖೆ ಕಾರ್ಯವಿಧಾನ ಪ್ರಗತಿಯಲ್ಲಿದೆ. ಸಲ್ಲಿಸಿದ ದಾಖಲೆಗಳು ವಿಚಾರಣೆಯ ನಿರ್ಣಾಯಕ ಭಾಗವಾಗಿದೆ” ಎಂದು ಹೇಳಿದ್ದಾರೆ.