ಹೈಕೋರ್ಟ್ ತೀರ್ಪು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ ಇ.ಡಿ. ಕೇಸು ದಾಖಲಾಗಿದೆ. ರಾಜ್ಯಪಾಲರು ದೆಹಲಿಯ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯನವರು ನಿವೇಶನ ವಾಪಸ್ ನೀಡುತ್ತಿರುವುದು ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರು ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿ ಮಾತನಾಡಿದ ಅವರು, “ರಾಜಕೀಯ ಸಹಾನುಭೂತಿ ಪಡೆಯಲು, ಅಧಿಕಾರಕ್ಕಾಗಿ ತೊಡೆ ತಟ್ಟುವ ಸ್ವಪಕ್ಷೀಯರನ್ನು ಸುಮ್ಮನಾಗಿಸಲು ಸೈಟ್ ಹಿಂತಿರುಗಿಸುವ ಈ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು. ಇದು ಕೆಲವೇ ಗಂಟೆಗಳಲ್ಲಿ ಆದರೂ ಅಚ್ಚರಿಯಿಲ್ಲ” ಎಂದರು.
“ಸಿದ್ದರಾಮಯ್ಯನವರು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. 2011ರಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿತ್ತು. ಆಗ, ತಪ್ಪು ಮಾಡದಿದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದರು” ಎಂದರು.
“ಕಳಂಕ, ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಇನ್ನಾದರೂ ತಮ್ಮ ಭಂಡತನವನ್ನು ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ಗೌರವಾನ್ವಿತ ರಾಜ್ಯಪಾಲರ ಕ್ಷಮೆ ಕೇಳಬೇಕು. ಸಾಮಾಜಿಕ ಕಾರ್ಯಕರ್ತ, ಬಡ ಕುಟುಂಬದವರಾದ ಸ್ನೇಹಮಯಿ ಕೃಷ್ಣರ ಮೇಲೆ ದೂರು ದಾಖಲಿಸಿ ಅವರನ್ನು ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿಗಳು, ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿ ಅವರು ತಕ್ಷಣ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.