ಸಿಎಂ ಸಿದ್ದರಾಮಯ್ಯ ಮತ್ತವರ ಕುಟುಂಬ, ಇನ್ನಿತರರ ವಿರುದ್ಧದ ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಇ.ಡಿ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದೆ.
ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತನಿಖೆಗೆ ವಿಭಾಗೀಯ ಪೀಠವು ಗ್ರೀನ್ ಸಿಗ್ನಲ್ ನೀಡಿದ್ದು, ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದಂತಾಗಿದೆ. ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರ ಹೇಳಿಕೆಯನ್ನು ಆಧರಿಸಿ ಹೈಕೋರ್ಟ್ ನ್ಯಾಯಪೀಠವು ಮುಡಾ ಹಗರಣ ಸಂಬಂಧ ಇ.ಡಿ ತನಿಖೆಗೆ ಅನುಮತಿ ನೀಡಿದೆ.
ನಟೇಶ್ ಹೇಳಿಕೆ ಆಧರಿಸಿ ಇ.ಡಿ ತನಿಖೆ ಮುದುವರಿಸಬಹುದು ಎಂದು ಸಿಜೆ ಅಂಜಾರಿಯಾ, ನ್ಯಾಅರವಿಂದ್ ಪೀಠವು ಮಧ್ಯಂತರ ಆದೇಶ ಹೊರಡಿಸಿದ್ದಲ್ಲದೇ, ಏ.8ಕ್ಕೆ ಮುಂದಿನ ವಿಚಾರಣೆ ನಿಗದಿ ಪಡಿಸಿದೆ.
ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಪೊಲೀಸರು ಈಗಾಗಲೇ ಸಲ್ಲಿಸಿರುವ ‘ಬಿ’ ರಿಪೋರ್ಟ್ ಗೆ ವಿರೋಧಿಸಿ ED (ಜಾರಿ ನಿರ್ದೇಶನಾಲಯ) ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ. ಹಗರಣದ ತನಿಖೆಯ ಬಿ ರಿಪೋರ್ಟ್ ವರದಿಯಲ್ಲಿ ಸಿಎಂ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಅವರಿಗೆ ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ಕ್ಲೀನ್‌ಚಿಟ್ ನೀಡಿದ್ದರು.
ಈ ಬಗ್ಗೆ ವಿರೋಧಿಸಿರುವ ಇ.ಡಿ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ವಿರುದ್ಧ ಒಟ್ಟು 8 ಪುಟಗಳ ತಕರಾರು ಅರ್ಜಿಯನ್ನು ಸಲ್ಲಿಸಿದ್ದಾರೆ.