ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಸೆಪ್ಟೆಂಬರ್ 12 ರವರೆಗೆ ರಿಲೀಫ್ ಸಿಕ್ಕಿದೆ.
ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಸೋಮವಾರ ಹೈಕೋರ್ಟ್ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ, ಸೆ.12ಕ್ಕೆ ವಿಚಾರಣೆ ಮುಂದೂಡಿದರು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿದರು. ಎಜೆ ಮಂಡಿಸಿದ ವಾದಲ್ಲಿ, ದೂರುದಾರರು ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ನಿರ್ದಿಷ್ಟ ಕಾಲದವರೆಗೆ ಕಾದಿಲ್ಲ. ಅಲ್ಲದೆ ತಕ್ಷಣವೇ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ರಾಜ್ಯಪಾಲರ ಪೂರ್ವಾನುಮತಿ ಕೋರಿದ್ದಾರೆ ಎಂದು ಉಲ್ಲೇಖಿಸಿದರು.
ಅಲ್ಲದೆ, ಈ ಪ್ರಕರಣದಲ್ಲಿ ತನಿಖಾಧಿಕಾರಿಯು ಪ್ರಾಥಮಿಕ ತನಿಖೆಯನ್ನು ನಡೆಸಿಲ್ಲ. ಪಿಸಿ ಕಾಯ್ದೆ ಸೆಕ್ಷನ್17 ಎ ಅಡಿಯಲ್ಲಿ ಪ್ರಾಸಿಕ್ಯೂಷನ್ ಮಂಜೂರಾತಿ ನೀಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಸ್‌ಒಪಿ ಅಡಿಯಲ್ಲಿ ರಾಜ್ಯಪಾಲರು ತನಿಖಾಧಿಕಾರಿಯಿಂದ ಪ್ರಕರಣದ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸಬೇಕಿತ್ತು ಎಂದರು.
ಇದೇ ಸಂದರ್ಭದಲ್ಲಿ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್ ವಾದ ಮಾಡಿ, ಕೆಸರೆ ಗ್ರಾಮ ಇದೆ, ಸರ್ವೇ ನಂಬರ್ 464 ಇದೆ. ಇದ್ಯಾವುದನ್ನೂ ನುಂಗಲಾಗಿಲ್ಲ. ಇದಕ್ಕೆ ದಾಖಲೆಗಳನ್ನು ನಾನು ತೋರಿಸುತ್ತೇನೆ ಎಂದರು.
ಇನ್ನು ದೂರದಾರ ಸ್ನೇಹಮಯಿ ಕೃಷ್ಣ ಪರವಾಗಿ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಾಡಿದರೆ, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಭಿಶೇಖ್ ಮನುಸಿಂಘ್ವಿ ಹಾಗೂ ಪ್ರೊ, ರವಿವರ್ಮಕುಮಾರ್ ಸೆಪ್ಟಂಬರ್ 12 ರಂದು ವಾದ ಮಂಡಿಸಲಿದ್ದಾರೆ. ಸೆ. 12 ವರೆಗೆ ಇತರ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡದಂತೆ ನೀಡಿದ್ದ ಹಿಂದಿನ ತೀರ್ಪು ಜಾರಿಯಲ್ಲಿರುತ್ತದೆ.