ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆದ ಕಾರಣದಿಂದಾಗಿ ಹಾವೇರಿಯ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹಂಚಿಕೊಂಡ ಆರೋಪ ಮೇಲೆ ಅವರ ವಿರುದ್ಧ ಹಾವೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುಳ್ಳು ಸುದ್ದಿ ಹಂಚಿಕೊಂಡ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ, ಸುದ್ದಿ ಪ್ರಕಟಿಸಿದ ಕನ್ನಡ ದುನಿಯಾ ಸಂಪಾದಕ ಹಾಗೂ ಕನ್ನಡ ನ್ಯೂಸ್ ಪತ್ರಿಕೆಯ ಸಂಪಾದಕರ ಮೇಲೆ ಹಾವೇರಿಯ ಸಿಇಎನ್ (ಸೈಬರ್ ಎಕನಾಮಿಕ್ ಮತ್ತು ನಾರೋಟಿಕ್ಸ್ ) ಠಾಣೆಯಲ್ಲಿ ಸುನಿಲ್ ಹುಚ್ಚಣ್ಣನವರ ದೂರು ದಾಖಲಿಸಿದ್ದಾರೆ.
ಕನ್ನಡ ನ್ಯೂಸ್ ನೌ, ಕನ್ನಡ ದುನಿಯಾ, ಪಬ್ಲಿಕ್ ಟಿವಿ ಸೇರಿದಂತೆ ಕೆಲವು ಮಾಧ್ಯಮಗಳು ಹಾವೇರಿಯಲ್ಲಿ ರೈತರೊಬ್ಬರು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದ್ದವು. ಕೆಲವು ಮಾಧ್ಯಮಗಳು ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಆಧರಿಸಿ ಸುದ್ದಿ ಮಾಡಿದ್ದವು.
ಕನ್ನಡ ದುನಿಯಾ, ಕನ್ನಡ ನ್ಯೂಸ್ ಇ-ಪೇಪರ್‌ನಲ್ಲಿ ಬಂದಿರುವ ಸುದ್ದಿಯನ್ನು ಫ್ಯಾಕ್ಟ್‌ಚೆಕ್ ಮಾಡಿದಾಗ ಪ್ರಸ್ತುತದಲ್ಲಿ ಹಾವೇರಿ ಜಿಲ್ಲೆಯಲ್ಲಿ ಈ ರೀತಿ ವಕ್ಷ ವಿಷಯಕ್ಕೆ ಸಂಬಂಧಿಸಿದಂತೆ ರೈತ ಆತ್ಮಹತ್ಯೆ ಪ್ರಕರಣ ನಡೆದಿರುವುದಿಲ್ಲ. ದಿನಾಂಕ: 06/01/2022 ರಂದು ಆಡೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರನಗಿರಿ ಗ್ರಾಮದ ರೈತ ಸಾಲದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯವಾಗಿದ್ದು, ಈ ಕುರಿತು ಈಗಾಗಲೆ ಆಡೂರ ಪೊಲೀಸ್ ಠಾಣೆ ಯುಡಿಆರ್ ನಂ. 3/2022 ಕಲಂ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್ ಅವರಿಗೆ ಸಲ್ಲಿಸಲಾಗಿದೆ. ಸದರಿ ಪ್ರಕರಣ ಮುಕ್ತಾಯವಾಗಿರುತ್ತದೆ.
ಆದರೆ ಹಳೆಯ ಸುದ್ದಿಯನ್ನು ಪ್ರಸ್ತುತ ವಕ್ಷ ವಿಚಾರಕ್ಕೆ ನಡೆದಿದೆ ಅಂತಾ ಬಿಂಬಿಸಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗಿದೆ. ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸದೆ ಸಂಸದ ತೇಜಸ್ವಿ ಸೂರ್ಯ, ‘X’ ಖಾತೆಯಲ್ಲಿ ಸುಳ್ಳು ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಕನ್ನಡ ದುನಿಯಾ, ಕನ್ನಡ ನ್ಯೂಸ್ ಸಂಪಾದಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸುನಿಲ್ ಹುಚ್ಚಣ್ಣನವರ ದೂರಿನಲ್ಲಿ ತಿಳಿಸಿದ್ದಾರೆ.
ಯಾವಾಗ ಈ ಸುದ್ದಿ ಸುಳ್ಳು, ಈ ರೀತಿ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಹಾವೇರಿ ಪೊಲೀಸರು ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡುತ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೆಯೇಂದ್ರ ಕೂಡ ಎಕ್ಸ್ ಖಾತೆಯಲ್ಲಿ ಈ ಸುಳ್ಳು ಸುದ್ದಿ ಹಂಚಿಕೊಂಡು ನಂತರ ಡಿಲೀಟ್ ಮಾಡಿದ್ದಾರೆ.