ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ತಮ್ಮ ಮೇಲೆ ಪ್ರಜ್ವಲ್ ರೇವಣ್ಣ ಮೂರು ವರ್ಷ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಸೆಕ್ಸ್ ಹಗರಣದಲ್ಲಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಶುಕ್ರವಾರ ಮತ್ತೊಂದು ಎಫ್ ಐಆರ್ ದಾಖಲಾಗಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಸಿಐಡಿಗೆ ದೂರು ನೀಡಿದ್ದಾರೆ.
ಸಂತ್ರಸ್ತೆ ತಮ್ಮ ದೂರಿನಲ್ಲಿ “ಪ್ರಜ್ವಲ್ ರೇವಣ್ಣ ತಮ್ಮ ಮೇಲೆ 3 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ನಮ್ಮ ದೈಹಿಕ ಸಂಪರ್ಕದ ಸನ್ನಿವೇಶಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅವುಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬೆದರಿಸಿ ಪದೇ ಪದೇ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು” ಎಂದು ದೂರಿದ್ದಾರೆ.
“ನನ್ನನ್ನು ಕೋಣೆಯೊಳೆಗೆ ಕರೆದು, ಬಾಗಿಲು ಹಾಕಿ ಕೈ ಹಿಡಿದು ಎಳೆದು ಮೈಮೆಲೆ ಎಳೆದುಕೊಂಡರು. ಸಂತ್ರಸ್ತೆ ಕೂಗಿಕೊಳ್ಳುವುದಾಗಿ ಹೇಳಿದಾಗ, ಪ್ರಜ್ವಲ್ ರೇವಣ್ಣ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿನ್ನ ಗಂಡನಿಂದ ನನ್ನ ತಾಯಿಯ ಎಂಎಲ್ಎ ಟಿಕೆಟ್ ತಪ್ಪಿದೆ. ಅವನು ಜಾಸ್ತಿ ಮಾತಾಡುತ್ತಾನೆ. ಸುಮ್ಮನೆ ಇರಲು ಹೇಳು ಎಂದು ಬೆದರಿಸಿದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎನ್) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುಗು), 354 (ಎ) (1) (ದೈಹಿಕ ಸಂಪರ್ಕ ಮತ್ತು ಅನಪೇಕ್ಷಿತ ಮತ್ತು ಸ್ಪಷ್ಟ ಲೈಂಗಿಕ ಪ್ರಚೋದನೆಗೆ ಒತ್ತಾಯ), 354 (ಬಿ) (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಗೆ ಕ್ರಿಮಿನಲ್ ಬಲದ ಆಕ್ರಮಣ ಅಥವಾ ಒತ್ತಾಯ) 354(c) (voyeurism-ಅಶ್ಲೀಲ ಚಿತ್ರ ರೆಕಾರ್ಡ್ ಮಾಡಿಕೊಳ್ಳುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿಭಾಗ 66(e) (ಗೌಪ್ಯತೆ ಉಲ್ಲಂಘನೆ)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.