16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ಜುಲೈ 15 ರಿಂದ 26ರವರೆಗೆ ನಡೆಯಲಿದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.
ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜೊತೆ ಜಂಟಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನ ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು” ಎಂದರು.
“2024-24ನೇ ಸಾಲಿನ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿ ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿ ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನು ಮಂಡಿಸಿ, ಕ್ರಮಕೈಗೊಳ್ಳಲಾಗುವುದು” ಎಂದು ಹೇಳಿದರು.
“9 ದಿನಗಳ ಕಾಲ ಪ್ರಶ್ನೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನ ನಡೆಸಲಾಗುವುದು” ಎಂದು ತಿಳಿಸಿದರು.
“ಸಭೆಗೆ ಬೇಗ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುವುದು. ಕಳೆದ ಭಾರೀ ನೀಡಿದ ಅವಕಾಶ ಈ ಭಾರಿಯೂ ನೀಡುತ್ತೇವೆ. ಇಡೀ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತೆ. ಅವರು ಎಷ್ಟೊತ್ತಿಗೆ ಬರುತ್ತಾರೆ, ಯಾವಾಗ ಹೋಗುತ್ತಾರೆ ಗಮನದಲ್ಲಿ ಇಟ್ಟುಕೊಂಡು ಅವಕಾಶ ನೀಡುತ್ತೇವೆ” ಎಂದರು.
“ಮುಂದಿನ ದಿನಗಳಲ್ಲಿ ಆ್ಯಪ್ ಮಾಡುತ್ತೇವೆ. ವಿಧಾನಸೌಧದ ಯಾವ ಕೊಠಡಿಯಲ್ಲಿ ಯಾವ ಸಚಿವರು ಇದ್ದಾರೆ, ಕೊಠಡಿ ಸಂಖ್ಯೆ, ಇಲಾಖೆಯ ಹೆಸರು, ವಿಧಾನಸೌಧದ ಸಂಪೂರ್ಣ ಮಾಹಿತಿ ಆ ಆ್ಯಪ್ನಲ್ಲಿ ಇರಲಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ” ಎಂದು ತಿಳಿಸಿದರು.
ಶಾಸಕರ ಪ್ರಶಸ್ತಿ ಬಹುತೇಕ ಆಯ್ಕೆ: ಹೊರಟ್ಟಿ
“2022-23ನೇ ಸಾಲಿನ ಅತ್ಯುತ್ತಮ ಶಾಸಕರ ಪ್ರಶಸ್ತಿ ಬಹುತೇಕ ಆಯ್ಕೆ ಆಗಿದೆ. ಈಗ ಹೇಳಲು ಸಾಧ್ಯವಿಲ್ಲ. ಮೊದಲ ದಿನದ ಅಧಿವೇಶನ ಬೆಳಿಗ್ಗೆ 11ಕ್ಕೆ ಪ್ರಾರಂಭ ಆಗಲಿದೆ. ನಂತರ ಪ್ರತಿದಿನದ್ದು ತಿಳಿಸಲಾಗುತ್ತೆ” ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
“ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಿಪಕ್ಷಗಳಿಂದ ಒಂದು ವಾರ ಹೆಚ್ಚಿನವರೆಗೆ ಅಧಿವೇಶನ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಭೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ” ಎಂದರು.
ಸಚಿವರುಗಳಿಂದ ಕೊಠಡಿ ನವೀಕರಣ ವಿಚಾರವಾಗಿ ಮಾತನಾಡಿ, “ಸುಣ್ಣ ಬಣ್ಣ ಹಚ್ಚಿಕೊಳ್ಳಲು ಅವಕಾಶ ಇದೆ. ಶೌಚಾಲಯ, ಬಣ್ಣ ಬದಲಿಸಿಕೊಳ್ಳಬಹುದು. ನವೀಕರಣ ಮಾಡಬಾರದು, ಅನುಮತಿ ಪಡೆದು ಮಾಡಬೇಕು. ವಾಸ್ತು ಪ್ರಕಾರ ವಿಧಾನಸೌಧ ಮಾಡಿದ್ದಾರೆ. ಮತ್ತೆ ಆ ರೀತಿ ಅವಕಾಶ ಕೊಡುವುದಿಲ್ಲ. ಆ ರೀತಿ ಮಾಡಬಾರದು ಅಂತ ಹೇಳುತ್ತೇವೆ. ಈ ಹಿಂದೆ ಒಬ್ಬ ಸಚಿವರು ಈ ರೀತಿ ಮಾಡಿ ತೊಂದರೆ ಆಗಿತ್ತು. ಅವರ ಹೆಸರು ಹೇಳುವುದಿಲ್ಲ. ಯಾವ ಸಚಿವರೂ ಕೊಠಡಿಯ ಗೋಡೆ ಒಡೆಯುವುದಕ್ಕೆ ಅವಕಾಶವಿಲ್ಲ” ಎಂದು ಹೇಳಿದರು.