Homeಕರ್ನಾಟಕಮುಂಗಾರು ಮಳೆ | ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರ, ಜನಜೀವನ ಅಸ್ತವ್ಯಸ್ತ

ಮುಂಗಾರು ಮಳೆ | ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರ, ಜನಜೀವನ ಅಸ್ತವ್ಯಸ್ತ

ಮೂರು ದಿನಗಳ ಹಿಂದೆ ಆರಂಭವಾದ ಮುಂಗಾರು ಮಳೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದೆ. ಮಳೆಯಿಂದ ಮಂಗಳೂರು ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದ ನಗರದ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ರಸ್ತೆಗಳಲ್ಲೇ ನೀರು ಸಂಗ್ರಹವಾಗಿದೆ. ಕರಾವಳಿ ಪ್ರದೇಶದಲ್ಲಿ ಮಳೆಯಿಂದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವೂ ಸಂಭವಿಸಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಸಿಗರೂ ಕಷ್ಟ ಅನುಭವಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಸೌಂದರ್ಯ ಸವಿಯಲು ಬಂದವರು ರಸ್ತೆ ಸಂಚಾರದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ.

ಅಂಗನವಾಡಿಗಳಿಗೆ ರಜೆ

ಧಾರಾಕಾರ ವರ್ಷಧಾರೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಇಂದು (ಸೋಮವಾರ) ರಜೆ ಘೋಷಿಸಲಾಗಿದೆ ಎಂದು ದ.ಕ. ಪ್ರಭಾರ ಜಿಲ್ಲಾಧಿಕಾರಿ ಆನಂದ್ ಕೆ. ತಿಳಿಸಿದ್ದಾರೆ.

ಎಸ್​​ಡಿಆರ್​​ಎಫ್ ತಂಡ ಆಗಮನ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಆಗಮಿಸಲಿವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದ್ದಾರೆ. ಭಾನುವಾರ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಆನ್​ಲೈನ್ ಸಭೆ ನಡೆಸಿ ಅವರು ಮಾತನಾಡಿದರು.

ರಾಷ್ಟ್ರೀಯ ವಿಪತ್ತು ದಳದ (ಎನ್​​ಡಿಆರ್​​ಎಫ್) ಒಂದು ತಂಡ ಆಗಮಿಸಲಿದ್ದು, ಅದನ್ನು ಪುತ್ತೂರಿನಲ್ಲಿ ನಿಯೋಜಿಲಾಗುವುದು. ರಾಜ್ಯ ವಿಪತ್ತು ದಳದ (ಎಸ್​​ಡಿಆರ್​​ಎಫ್) ಎರಡು ತಂಡಗಳು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆಯಲ್ಲಿರಲಿವೆ. ಈಗಾಗಲೇ ಒಂದು ಎಸ್​​ಡಿಆರ್​​ಎಫ್ ತಂಡ ಆಗಮಿಸಿದೆ ಎಂದು ತಿಳಿಸಿದ್ದಾರೆ.

ವಿಪತ್ತು ನಿರ್ವಹಣೆಗೆ ‌‌ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಒಗಳು ತಮ್ಮ‌ ವ್ಯಾಪ್ತಿಯಲ್ಲಿ ಕಟ್ಟೆಚ್ಚರದಿಂದ ಇರಬೇಕು. ಯಾವುದೇ ಪ್ರಾಕೃತಿಕ ದುರಂತ ಸಂಭವಿಸಿದರೆ ತಕ್ಷಣವೇ ಸ್ಪಂದಿಸಬೇಕು. ಜೀವಹಾನಿ ತಪ್ಪಿಸಲು ಆದ್ಯತೆ ನೀಡಬೇಕು. ತಾಲೂಕು ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಿ, ದುರಂತದ ತೀವ್ರತೆ ತಗ್ಗಿಸಬೇಕು. ಮೆಸ್ಕಾಂ, ಅರಣ್ಯ ಸೇರಿದಂತೆ ಸಂಬಂಧಿಸಿದ ಯಾವುದೇ ಇಲಾಖೆಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

5 ದಿನ ರೆಡ್ ಅಲರ್ಟ್

ಹವಾಮಾನ ಇಲಾಖೆಯು 5 ದಿನ ರೆಡ್ ಅಲರ್ಟ್​​ ಘೋಷಿಸಿದೆ. ಈ‌ ಹಿಂದೆ ದುರ್ಘಟನೆ ಸಂಭವಿಸಿದ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಜೆಸಿಬಿ, ಬೋಟ್​​ಗಳನ್ನು ಸಿದ್ಧವಾಗಿಡಬೇಕು. ಶಾಲೆಗಳು ಶುರುವಾಗುವ ಮುನ್ನವೇ ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ತೆರವುಗೊಳಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ/

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments