Homeಕರ್ನಾಟಕಮೋಹನ್‌ದಾಸ್ ಪೈ ಅವರೇ ನಿಮ್ಮ ನಾಯಕರು ನಿಮ್ಮ ಮಾತು ಮೆಚ್ಚಬಹುದಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಮೋಹನ್‌ದಾಸ್ ಪೈ ಅವರೇ ನಿಮ್ಮ ನಾಯಕರು ನಿಮ್ಮ ಮಾತು ಮೆಚ್ಚಬಹುದಷ್ಟೇ: ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ವಿನಾ ಕಾರಣ ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಸ್ಥಾನ ಪಡೆಯುವುದಕ್ಕಾಗಿ ಅವರು ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ತಾಣದಲ್ಲಿ ಬರೆದುಕೊಂಡಿರುವ ಅವರು, “ಟಿ.ವಿ.ಮೋಹನ್‌ದಾಸ್ ಪೈ ಅವರೇ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಅಂದಿನ ಸರ್ಕಾರಕ್ಕೆ ಏಕೆ ಜ್ಞಾನೋದಯ ಮಾಡಲಿಲ್ಲ? ನಾವು 135 ಸ್ಥಾನಗಳನ್ನು ಪಡೆದ ನಂತರ ನಿಮ್ಮ ಸಂಕಟಗಳು ನೋವಿನಿಂದ ಕೂಡಿದೆ ಎಂದು ತೋರುತ್ತಿದೆ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಕರ್ನಾಟಕವನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿರುವಾಗ ಏಕೆ ಸುಮ್ಮನಿರುವಿರಿ” ಎಂದು ಪ್ರಶ್ನಿಸಿದ್ದಾರೆ.

“ಕರ್ನಾಟಕವು ಭಾರತದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಕೊಡುಗೆ ನೀಡುವ ರಾಜ್ಯವಾಗಿದೆ, ಬೆಂಗಳೂರುನಿಂದ 2024 ರಲ್ಲಿ ಭಾರತದ ಜಿಡಿಪಿಗೆ ₹ 9.1 ಲಕ್ಷ ಕೋಟಿ ಕೊಡುಗೆ ಸಿಕ್ಕಿದೆ – ಈ ಸಂಗತಿ ಕೇಂದ್ರ ನಿಧಿಯ ಹೆಚ್ಚಿನ ಪಾಲು ಪಡೆಯಲು ಅರ್ಹವಲ್ಲವೇ? ನ್ಯಾಯಯುತ ಪಾಲು ದೊರಕಿದರೆ ಮೂಲಸೌಕರ್ಯ ವ್ಯವಸ್ಥೆಯ ಉನ್ನತಿಗಾಗಿ ಅನುಕೂಲವಾಗಲಿದೆಯಲ್ಲವೇ? ನಗರದ ನಿರ್ಣಾಯಕ ಮೂಲಸೌಕರ್ಯವನ್ನು ಸುಧಾರಿಸಲು ಉದ್ದೇಶಿಸಿ 15 ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಒಟ್ಟು ₹ 11,495 ಕೋಟಿಗಳನ್ನು ನೀಡಿತು. ಕೇಂದ್ರ ಸರ್ಕಾರ ಅದನ್ನು ತಕ್ಷಣವೇ ವಿತರಿಸಬೇಕಲ್ಲವೇ?” ಎಂದು ಕೇಳಿದ್ದಾರೆ.

“ಕೇಂದ್ರ ಬಜೆಟ್‌ಗೂ ಮುನ್ನ ನಗರದಲ್ಲಿ ಸುರಂಗ ರಸ್ತೆಗಳು, 17 ಹೊಸ ಮೇಲ್ಸೇತುವೆಗಳು, ಪೆರಿಫೆರಲ್ ರಿಂಗ್ ರಸ್ತೆ, ಉಪನಗರ ರೈಲು, ಬಫರ್ ವಲಯ ರಸ್ತೆಗಳು, ಡಬಲ್ ಡೆಕ್ಕರ್ ಫ್ಲೈಓವರ್‌ಗಳು ಮತ್ತು ನೀರು ಸರಬರಾಜು ಉಪಕ್ರಮಗಳಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯವು ಹಣಕಾಸಿನ ನೆರವು ಕೋರಿದಾಗ ಒಂದು ಪೈಸೆಯನ್ನೂ ನೀಡಲಿಲ್ಲ. ಬೆಂಗಳೂರು 16 ಬಿಜೆಪಿ ಶಾಸಕರನ್ನು ಹೊಂದಿದೆ ಮತ್ತು ನಗರದ ಎಲ್ಲಾ 4 ಸಂಸದರು ಸೇರಿದಂತೆ ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ 19 ಸ್ಥಾನಗಳನ್ನು NDA ಹೊಂದಿದೆ. ತಮ್ಮ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವುದು ಅವರ ಜವಾಬ್ದಾರಿಯಲ್ಲವೇ? ಬೆಂಗಳೂರಿಗೆ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯದ ಬಗ್ಗೆ ಯಾಕೆ ಮೌನವಾಗಿದ್ದೀರಿ” ಎಂದು ಪ್ರಶ್ನೆ ಮಾಡಿದ್ದಾರೆ.

“ಬೇರೆ ರಾಜ್ಯಗಳಿಗೆ ಹೋಗಲು ಕಂಪನಿಗಳು ಸಿದ್ದವಾಗಿರುವಾಗ ನೀವೇಕೆ ಮೌನವಹಿಸುತ್ತೀರಿ? ನಿಮ್ಮ ನಾಯಕರು ನಮ್ಮ ರಾಜ್ಯವನ್ನು AI ಅಥವಾ ಸೆಮಿಕಂಡಕ್ಟರ್ ಮಿಷನ್‌ಗಳ ಭಾಗವಾಗಿ ಆಯ್ಕೆ ಮಾಡದಿದ್ದಾಗ ನೀವು ಏಕೆ ಖಂಡಿಸಲಿಲ್ಲ? ಅಲ್ಲದೆ, ಕಳೆದ 10 ವರ್ಷಗಳಲ್ಲಿ ಬೆಂಗಳೂರು ದೇಶದ ಎಲ್ಲಾ ಪ್ರಮುಖ ಮಹಾನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ” ಎಂದಿದ್ದಾರೆ

“ಬೆಂಗಳೂರು ಹೊಸ ಕಂಪನಿಗಳ ಸ್ಥಾಪನೆಯಲ್ಲಿ 342% ಬೆಳವಣಿಗೆಯನ್ನು ಕಂಡಿದೆ. ಇದು ಎಲ್ಲಾ ಭಾರತದ ಎಲ್ಲ ನಗರಗಳಿಗೆ ಹೋಲಿಸಿದರೆ ಅತ್ಯಧಿಕ. ಬೆಂಗಳೂರು ದೇಶದಲ್ಲೇ ಅತ್ಯಧಿಕ ಉದ್ಯೋಗಿಗಳ ಭಾಗವಹಿಸುವಿಕೆಯ ದರ 76% ಹೊಂದಿದೆ. ಬೆಂಗಳೂರು ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ #1 ನಗರವಾಗಿದ್ದೇವೆ ಮತ್ತು ವೈಟ್ ಮತ್ತು ಬ್ಲೂ ಕಾಲರ್ ಕಾರ್ಮಿಕರಿಗೆ ವೇತನ ನೀಡುವಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ನೇರ ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ಭಾರತದಲ್ಲಿ ಎರಡನೇ ನಗರವಾಗಿದೆ. ಎಲ್ಲಾ ವಲಯಗಳ ಕಚೇರಿ ಪ್ರದೇಶದ ವಿಸ್ತರಣೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ- ಈ ವರ್ಷ 20 ಮಿಲಿಯನ್ ಚದರ ಅಡಿಗಳನ್ನು ದಾಟಲಿದೆ. ಸಾಮಾಜಿಕ ಆರ್ಥಿಕ ಮಟ್ಟದಲ್ಲಿ ಬೆಂಗಳೂರು ಅತ್ಯುನ್ನತ ಶ್ರೇಣಿಯನ್ನು ಹೊಂದಿದೆ, ವಲಸೆ ಹೋಗುವವರಿಗೆ ಬೆಂಗಳೂರು ದೇಶದಲ್ಲಿ ಅತ್ಯಂತ ಆದ್ಯತೆಯ ತಾಣವಾಗಿದೆ. ನಗರದ ಜನಸಂಖ್ಯೆಯ 50% ಕ್ಕಿಂತ ಹೆಚ್ಚು ವಲಸಿಗರು – ಇದು ದೇಶದಲ್ಲಿ ಅತಿ ಹೆಚ್ಚು ವಲಸೆಯ ಸಂಖ್ಯೆ. ಹೊಸ ಕಾರು ನೋಂದಣಿಗಳಲ್ಲಿ 2 ನೇ ಅತ್ಯಧಿಕ ಬೆಳವಣಿಗೆ; ಇದು ವಲಸೆಯ ನೇರ ಫಲಿತಾಂಶ” ಎಂದು ಹೇಳಿದ್ದಾರೆ.

“ನಮ್ಮ ನಗರದ ಮೂಲಸೌಕರ್ಯಗಳ ಮೇಲಿನ ಒತ್ತಡವು ತ್ವರಿತ ಬೆಳವಣಿಗೆ ಮತ್ತು ಜನಸಂಖ್ಯೆಯ ಉಲ್ಬಣದಿಂದ ಉಂಟಾಗುತ್ತದೆ ಮತ್ತು ಸರ್ಕಾರವು ಅದನ್ನು ಅರ್ಹವಾದ ತುರ್ತು ಕ್ರಮಗಳಿಂದ ನಿಭಾಯಿಸುತ್ತಿದೆ. ನಿಮ್ಮ ಪಕ್ಷವು ಮೇಕ್‌ಇನ್‌ಇಂಡಿಯಾ, ಸ್ಕಿಲ್‌ಇಂಡಿಯಾ, ಡಿಜಿಟಲ್‌ಇಂಡಿಯಾ, ಅಮೃತ್‌ಕಾಲ್ ಮತ್ತು ವಿಕ್ಷಿತ್‌ಭಾರತದಂತಹ ಮಹಾನ್ ಘೋಷಣೆಗಳನ್ನು ಪ್ರಚಾರ ಮಾಡಬಹುದು, ಆದರೆ ಕರ್ನಾಟಕದ ಕೊಡುಗೆ ಇಲ್ಲದಿದ್ದರೆ ಈ ಘೋಷಣೆಗಳು ಪೊಳ್ಳಾಗಿರುತ್ತವೆ” ಎಂದು ಟೀಕಿಸಿದ್ದಾರೆ.

“ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ನಿಮ್ಮ ನಿರಂತರ ನಕಾರಾತ್ಮಕತೆಯನ್ನು ನಿಮ್ಮ ನಾಯಕರು ಮೆಚ್ಚಬಹುದು ಎಂದು ನನಗೆ ಖಾತ್ರಿಯಿದೆ, ಆದರೆ ನಿಮಗೆ ತಿಳಿದಿರಲಿ, ನಿಮ್ಮ ಈ ಟೀಕೆಗಳು ನಿಮಗೆ ದೆಹಲಿಯಲ್ಲಿ ಅವಕಾಶ ದೊರಕಿಸುವುದಿಲ್ಲ! ನಿಮ್ಮ ನಿರಂತರ ಟೀಕೆಗಳಿಂದ ರಾಜ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಾ? ಅಥವಾ ನೀವು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದೀರಾ? ದೆಹಲಿಯ ಅಧಿಕಾರದ ಮೊಗಸಾಲೆಯಲ್ಲಿ ನೀವು ಎಲ್ಲರಿಗೂ ಹತ್ತಿರವಾಗಿದ್ದೀರಿ, ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಿ ತೋರಿಸಿ” ಎಂದು ಆಗ್ರಹಿಸಿದ್ದಾರೆ.

“ಮೇಲಿರುವ ಭಗವಂತ ಕೆಳಗೆ ಬಂದರೂ ಬೆಂಗಳೂರನ್ನು ಕೇವಲ ಎರಡು-ಮೂರು ವರ್ಷಗಳಲ್ಲಿ ಬದಲಾಯಿಸಲು ಆಗುವುದಿಲ್ಲ’ ಎಂದು ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರು.

ಈ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದ ಮೋಹನ್‌ದಾಸ್ ಪೈ, “ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿ ಬಂದು ಎರಡು ವರ್ಷ ಆಯಿತು. ನಗರಕ್ಕೆ ಪ್ರಬಲ ಸಚಿವರು ಸಿಕ್ಕಿದ್ದಾರೆಂದು ನಾವೆಲ್ಲಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದೆವು. ಆದರೆ, ನಮ್ಮ ಜೀವನ ಇನ್ನಷ್ಟು ಕೆಟ್ಟದಾಗಿದೆ. ಯಾವುದನ್ನೂ ಸಮಯಕ್ಕೆ ಸರಿಯಾಗಿ ಜಾರಿ ಮಾಡಿಲ್ಲ” ಎಂದು ಟೀಕಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments