RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಸಮುದಾಯಗಳ ಉಳಿವಿಗಾಗಿ ಪ್ರತಿ ದಂಪತಿಯು ಕನಿಷ್ಠ ಮೂವರು ಮಕ್ಕಳನ್ನು ಹೆರಬೇಕು ಎಂದು ಹೇಳಿರುವುದು ರಾಷ್ಟ್ರೀಯ ನೀತಿಗೆ ವಿರುದ್ಧವಾದ ಸಂಗತಿಯಾಗಿದ್ದು ಅವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನ ಸಂಖ್ಯೆಯಿಂದ ಉಂಟಾಗುವ ಸವಾಲುಗಳನ್ನ ನಿಭಾಯಿಸಲು ಉನ್ನತ ಅಧಿಕಾರ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು. ಇನ್ನು ದೇಶವೊಂದರ ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯಾ ಸ್ಪೋಟವು ಸದಾ ಮಾರಕ ಎಂಬುದನ್ನು ಹಲವು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ” ಎಂದಿದ್ದಾರೆ.
“ಈ ಸದ್ಯ ಭಾರತದ ಜನಸಂಖ್ಯಾ ಸ್ಪೋಟ ಮತ್ತು ಅದರಿಂದ ಇಲ್ಲಿನ ಜನರಿಗೆ ದೊರಕುತ್ತಿರುವ ಬದುಕಿನ ಅವಕಾಶಗಳು ಮತ್ತು ಸೌಲಭ್ಯವನ್ನು ಗಮನಿಸಿದರೆ ನಮ್ಮಲ್ಲಿ ಜನಸಂಖ್ಯಾ ನಿಯಂತ್ರಣ ಮಾಡುವುದು ಅಗತ್ಯವಾಗಿದೆ. ಇದಕ್ಕಾಗಿ ನಮ್ಮ ಸರ್ಕಾರಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದು ಇದು ರಾಷ್ಟ್ರೀಯ ನೀತಿಯ ಆಶಯವೂ ಆಗಿದೆ” ಎಂದು ಹೇಳಿದ್ದಾರೆ.
“ದೇಶದ ಜನರು ಸಮಾನವಾದ ಘನತೆಯ ಬದುಕು ನಡೆಸಲು ಜನಸಂಖ್ಯಾ ಸ್ಪೋಟವೇ ಅಡ್ಡಿಯಾಗಿರುವಾಗ ಮೋಹನ್ ಭಾಗವತ್ ಅವರು ಜವಾಬ್ದಾರಿಯನ್ನು ಅರಿತು ಮಾತನಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ. ಜನಸಂಖ್ಯಾ ಸ್ಪೋಟದ ಈ ಸಂದರ್ಭದಲ್ಲಿ ಯಾರೇ ಈ ರೀತಿಯಾಗಿ ಹೇಳಿಕೆಗಳನ್ನು ನೀಡಿದರೂ ಅದನ್ನು ನಾನು ಖಂಡಿಸುವೆ” ಎಂದು ತಿಳಿಸಿದ್ದಾರೆ.