Homeಕರ್ನಾಟಕಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವ ಮೋದಿ: ಬಿ ಕೆ ಹರಿಪ್ರಸಾದ್

ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವ ಮೋದಿ: ಬಿ ಕೆ ಹರಿಪ್ರಸಾದ್

ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಇದು ಶೋಭೆ ತರುವುದಿಲ್ಲ. ತುರ್ತು ಪರಿಸ್ಥಿತಿಯ ಕುರಿತು ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಬ್ರಿಟಿಷ್ ಮಾಜಿ ಉಪಪ್ರಧಾನಿ ಮೈಕೆಲ್ ಫೂಟ್ ಅವರು ಇಂದಿರಾ ಗಾಂಧಿಯವರ ತುರ್ತು ಪರಸ್ಥಿತಿಯನ್ನು ನಿಭಾಯಿಸಿದ್ದನ್ನೂ ನೋಡಿ, “ಇಂತಹ ನಿರ್ಣಾಯಕ ಘಟ್ಟದಲ್ಲಿ ಭಾರತವನ್ನು ಐಕ್ಯತೆಯನ್ನು ಹಿಡಿದಿಟ್ಟುಕೊಂಡರೆ, ಅದರ ಶ್ರೇಯಸ್ಸು ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದರು” ಎಂದು ನೆನಪಿಸಿದರು.

“ಇತಿಹಾಸವನ್ನೇ ಅರಿಯದ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವುದು ಇತಿಹಾಸಕ್ಕೆ ಮಾಡುವ ಅಪಚಾರ. ಬಿಜೆಪಿಯವರಿಗೆ ಅಗ್ರಗಣ್ಯ ನಾಯಕರೆಸಿಕೊಂಡ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ತುರ್ತು ಪರಸ್ಥಿತಿಯಲ್ಲಿ ಗೃಹ ಬಂಧನದಲ್ಲಿಡಲಾಗಿತ್ತೇ ಹೊರತು, ಜೈಲಿನಲ್ಲಲ್ಲ ಎಂಬುದನ್ನ ಮೊದಲು ಅರಿತುಕೊಳ್ಳಲಿ. ಈ ಎಲ್ಲ ಹಿನ್ನೆಲೆಯನ್ನು ತಿಳಿಯದೇ ತುರ್ತು ಪರಿಸ್ಥಿತಿಯ ಕುರಿತು ಸುಳ್ಳಿನ ಭಾಷಣ ಮಾಡುವುದು ಪ್ರಧಾನಿ ಹುದ್ದೆಗೆ ಶೋಭೆ ತರುವ ಕೆಲಸವಲ್ಲ” ಎಂದು ತಿರುಗೇಟು ನೀಡಿದರು.

“ತುರ್ತುಪರಿಸ್ಥಿತಿ ಸಂವಿಧಾನದ ಆಶಯಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಬದಲಾಗಿ ಸಂವಿಧಾನವನ್ನು ಸಂರಕ್ಷಿಸಲು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕೈಗೊಂಡಿರುವ ನಡೆಯಾಗಿದೆ ಎಂದು ಇಂದಿರಾ ಗಾಂಧಿಯವರು ಸಂಸತ್ತಿನಲ್ಲಿ ಹೇಳಿದ್ದರು” ಎಂದರು.

“ಅಚ್ಚರಿದಾಯಕ ವಿಷಯವೆಂದರೆ , ತುರ್ತುಪರಿಸ್ಥಿತಿಯ ಹೇರಿಕೆಗೆ ಕಾರಣವಾದ ಸಂದರ್ಭ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲೇ ಇಲ್ಲ. ಹೀಗಾಗಿಯೇ ಈ ಬಗ್ಗೆ ತಪ್ಪು ಕಲ್ಪನೆಗಳು, ಬೇಕಾಬಿಟ್ಟಿಯಾದ ವಿಶ್ಲೇಷಣೆಗಳು ನಡೆಯುತ್ತಲೇ ಇವೆ. ಮುಖ್ಯವಾಗಿ, ತುರ್ತುಪರಿಸ್ಥಿತಿ ಎಂಬುವುದು ಸಂವಿಧಾನೇತರ ವಿಷಯವಾಗಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶವಾಗಿದೆ” ಎಂದು ವಿವರಿಸಿದರು.

ಜುಲೈ 22, 1975 ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಇಂದಿರಾ ಗಾಂಧಿಯವರು, “ನಮ್ಮ ಸಂವಿಧಾನದ ರಚನಕಾರರು ಬಾಹ್ಯ ಆಕ್ರಮಣ ಮಾತ್ರವಲ್ಲ, ಆಂತರಿಕ ಗಲಭೆಗಳು ಕೂಡಾ ರಾಷ್ಟ್ರೀಯ ಹಿತಾಸಕ್ತಿಗೆ ಬೆದರಿಕೆಯೊಡ್ಡಬಹುದು ಎಂದು ಊಹಿಸಿದ್ದರು. ಅದಕ್ಕಾಗಿಯೇ ಅವರು ತುರ್ತುಪರಿಸ್ಥಿತಿಯಂತಹ ಒಂದು ಅವಕಾಶವನ್ನು ಒದಗಿಸಿದ್ದಾರೆʼʼ ಎಂದು ಹೇಳಿದ್ದನ್ನು ಸ್ಮರಿಸಬಹುದು.

“ತುರ್ತು ಪರಿಸ್ಥಿತಿ ಯುದ್ಧದಂತಹ ಸನ್ನಿವೇಶಗಳು ನಿರ್ಮಾಣವಾದರೆ ಅದಕ್ಕೆ ಸಾಂವಿಧಾನಿಕ ಪ್ರತಿಕ್ರಿಯೆಯಾಗಿದೆ. ಒಂದೆಡೆ ಸಂವಿಧಾನವು ಯುದ್ಧದ ಸಮಯದಲ್ಲಿ ಬಾಹ್ಯ ತುರ್ತು ಪರಿಸ್ಥಿತಿಯನ್ನು ಹೇರಿದರೆ, ಅದೇ ಸಂವಿಧಾನವು ದೇಶದೊಳಗೆ ಸೃಷ್ಟಿಯಾಗುವ ಯುದ್ಧದಂತಹ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತದೆ” ಎಂದು ಸಮರ್ಥಿಸಿಕೊಂಡರು.

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments