ಅನ್ನದಾತರು ಬರುವ ರಸ್ತೆಗಳಿಗೆ ಮೋದಿ ಸರ್ಕಾರ ಮುಳ್ಳುತಂತಿಯ ಬೇಲಿ ಹಾಕಿದೆ, ರಸ್ತೆಗಳಿಗೆ ಮೊಳೆ ಹೊಡೆದಿದೆ. ರಾಮಮಂದಿರ ಉದ್ಘಾಟಿಸಿದವರ ಆಡಳಿತ ರಾವಣನನ್ನೇ ಮೀರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ರಾವಣನಿಗೆ ತನ್ನ ವೈರಿ ಶ್ರೀರಾಮ ಲಂಕೆಗೆ ಬರುವುದು ಗೊತ್ತಿದ್ದರೂ ಆತ ಬರುವ ಹಾದಿಗೆ ಬೇಲಿ ಹಾಕಲಿಲ್ಲ” ಎಂದಿದ್ದಾರೆ.
ರೈತರು ‘ದೆಹಲಿ ಚಲೋ’ ಮೆರವಣಿಗೆ ಮುಂದುವರಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ ಮುಂದುವರಿಸಲಾಗಿದೆ. ಗಡಿ ಪ್ರದೇಶಗಳ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ಹರಿಯಾಣದ ಸಿಂಘು, ಟಿಕ್ರಿ ಗಡಿ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹರಿಯಾಣ ಗಡಿ ಮತ್ತು ಉತ್ತರಪ್ರದೇಶ ಘಾಜಿಪುರ ಗಡಿ ರಸ್ತೆಗಳಲ್ಲಿ ಬಹುಪದರ ಕಾಂಕ್ರಿಟ್ ತಡೆಗೋಡೆ, ಕಬ್ಬಿಣದ ಮೊಳೆಗಳು, ಕಂಟೇನರ್ ಗೋಡೆಗಳನ್ನು ನಿರ್ಮಿಸಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿದೆ. ಈ ವಿಚಾರಕ್ಕೂ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಇದು ಸಂವಿಧಾನ ಬಾಹಿರ ಕ್ರಮ. ನಾಡಿನ ರೈತರನ್ನು ಈ ಕೂಡಲೆ ಬಿಡುಗಡೆ ಮಾಡಬೇಕು” ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ರೈತ ಸಂಘಟನೆಗಳು ಕರೆಕೊಟ್ಟಿದ್ದ ‘ದೆಹಲಿ ಚಲೋ’ ಪ್ರತಿಭಟನೆಗೆ ಹೊರಟಿದ್ದ ಕರ್ನಾಟಕದ ರೈತರನ್ನು ಭೋಪಾನ್‌ನಲ್ಲಿ ಬಂಧಿಸಿದ್ದ ಪೊಲೀಸರು, ಇದೀಗ, ಅವರನ್ನು ಮಧ್ಯಪ್ರದೇಶ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಗುರುವಾರ ಮುಂಜಾನೆ ಮಧ್ಯಪ್ರದೇಶ-ಉತ್ತರ ಪ್ರದೇಶ ಗಡಿಯಲ್ಲಿ ಯಾವುದೇ ಮಾಹಿತಿ ನೀಡದೆ ರೈತರನ್ನು ರೈಲು ಹತ್ತಿಸಿದ್ದಾರೆ ಎಂದು ವರದಿಯಾಗಿದೆ.