Homeಕರ್ನಾಟಕಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿ ಮೋದಿ: ಸಿಎಂ ಸಿದ್ದರಾಮಯ್ಯ

ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿ ಮೋದಿ: ಸಿಎಂ ಸಿದ್ದರಾಮಯ್ಯ

ಗ್ಯಾಸ್ ಸಬ್ಸಿಡಿ ತೆಗೆದು ಬಡವರ ವಿರೋಧಿಯಾಗಿರುವದು ಪ್ರಧಾನಿ ಮೋದಿ ಸರ್ಕಾರ. ಗೊಬ್ಬರ, ಔಷಧಿ, ರಾಗಿ, ಗೋದಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸಿದ ಮೋದಿ ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿಯಾಗಿದ್ದಾರೆ” ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಿಜೆಪಿ ಯಾವ‌ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ? 4 ರೂ. ಹಾಲಿನ ದರ ಹೆಚ್ಚಿಸಿ ಆ ಹಣವನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ. ಅದು ಸರ್ಕಾರಕ್ಕೆ ಬರಲ್ಲ”ಎಂದರು.

“ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದೂ ರಾಜಕೀಯ ಬದ್ಧತೆಯೇ ಆಗಿದೆ. ಸುಳ್ಳೇ ಬಿಜೆಪಿಯ ಮನೆ ದೇವರು. ಆರ್‌ಎಸ್‌ಎಸ್‌ ಸುಳ್ಳಿನ ಮಹಾ ಕಾರ್ಖಾನೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಸಾವರ್ಕರ್ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಕಾಂಗ್ರೆಸ್ ಸೋಲಿಸಿದ್ದು ಎಂದು ಬಿಜೆಪಿ ಬಂಡಲ್ ಬಿಡುತ್ತಿದೆ” ಎಂದು ಕುಟುಕಿದರು.

“ನಾವು ಸುಳ್ಳಿನ ಕಾರ್ಖಾನೆ ಆರ್‌ಎಸ್‌ಎಸ್‌ ಸುಳ್ಳುಗಳ ವಿರುದ್ಧ ಸತ್ಯವನ್ನು ದೇಶದ ತುಂಬ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಾ ಮೋದಿ ಸರ್ಕಾರ ತನ್ನ ಬಡವರ, ಮಧ್ಯಮ ವರ್ಗ ವಿರೋಧಿತನವನ್ನು ಬಚ್ಚಿಡಲು ಯತ್ನಿಸುತ್ತಿದೆ. ಸರ್ಕಾರ ದಿವಾಳಿ ಆಗಿದ್ದರೆ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂಪಾಯಿ ಪ್ರತೀ ವರ್ಷ ತೆಗೆದಿಡಲು ಸಾಧ್ಯವಾಗುತ್ತಿತ್ತಾ” ಎಂದು ಪ್ರಶ್ನಿಸಿದರು.

ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ

“ದೇಶದಲ್ಲಿ ಇಂಧನ, ಅಗತ್ಯ ವಸ್ತುಗಳು, ರಸಗೊಬ್ಬರ, ಚಿನ್ನ, ಸಿಮೆಂಟ್, ಕಬ್ಬಿಣ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಜನರ ಮೇಲೆ ಈ ಬೆಲೆ ಏರಿಕೆ ಹೊರೆ ತಗ್ಗಿಸಲು ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದು, ರೈತರ ಬದುಕು ಕಾಪಾಡಲು ಹಾಲಿನ ಬೆಲೆ ಏರಿಸಿದ್ದೇವೆ. ಹೀಗಾಗಿ ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

“ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಹೀಗಾಗಿ ಬಿಜೆಪಿ ನಾಯಕರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಇರಬೋಕೇ ಹೊರತು, ಬಡವರ ಪರವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರವಲ್ಲ. ಬಿಜೆಪಿಯಲ್ಲಿ ಹಾಗೂ ಜನತಾ ದಳದಲ್ಲಿ ಆಂತರಿಕ ಜಗಳ, ನಾಯಕತ್ವದ ಕೊರತೆ ಮುಚ್ಚಿಡಲು ಇಂದು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ” ಎಂದರು.

“ಸತತ ಬೆಲೆ ಏರಿಕೆ ಮೂಲಕ ಬಡವರ ರಕ್ತವನ್ನು ಹೀರಿ ಅಂಬಾನಿ-ಅದಾನಿ ಸೇರಿದಂತೆ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕಳೆದ 11 ವರ್ಷದ ಕೇಂದ್ರ ಸರ್ಕಾರದ ಸಾಧನೆ” ಎಂದು ಸಚಿವ ಕೃಷ್ಣ ಬೈರೇಗೌಡ ಹರಹಾಯ್ದರು.

“ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಲೀಟರ್ ಡೀಸೆಲ್ ಮೇಲಿನ ತೆರಿಗೆ 3.40 ರೂಪಾಯಿ ಇತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಈ ಪ್ರಮಾಣವನ್ನು 20 ರೂಪಾಯಿಗೆ ಏರಿಸಲಾಗಿದೆ. ಲೀಟರ್ ಪೆಟ್ರೋಲ್ ಗೆ 9.20 ರೂಪಾಯಿ ಇದ್ದ ತೆರಿಗೆಯನ್ನು ಇದೀಗ 20 ರೂಪಾಯಿಗೆ ಏರಿಸಲಾಗಿದೆ. ಅಡಿಗೆ ಅನಿಲವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್ ಅನ್ನು 400 ರೂಪಾಯಿಗೆ ನೀಡಲಾಗುತ್ತಿತ್ತು. ಆ ಬೆಲೆಯೂ ಇದೀಗ ಸಾವಿರ ರೂಪಾಯಿ ದಾಟಿದೆ” ಎಂದು ಟೀಕಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮಯೂರ್ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ಸೇರಿ ಪ್ರಮುಖರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments